ಬೆಂಗಳೂರು, 25 ಜುಲೈ (ಹಿ.ಸ.) :
ಆ್ಯಂಕರ್ : ಖರೀಫ್ ಹಂಗಾಮಿಗೆ ಯೂರಿಯಾ ಗೊಬ್ಬರ ಕೊರತೆಯಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ರಸಾಯನಿಕ ಹಾಗೂ ಗೊಬ್ಬರ ಇಲಾಖೆ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಖರೀಫ್ ಕಾಲಕ್ಕೆ ಕೇಂದ್ರ ಸರ್ಕಾರದಿಂದ 11,17,000 ಮೆಟ್ರಿಕ್ ಟನ್ ಯೂರಿಯಾ ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದ್ದರೂ ಇದುವರೆಗೆ ಕೇವಲ 5,16,959 ಮೆಟ್ರಿಕ್ ಟನ್ ಮಾತ್ರ ಪೂರೈಕೆ ಆಗಿದೆ. ಆದರೆ ಏಪ್ರಿಲ್ ರಿಂದ ಜುಲೈವರೆಗಿನ ರಾಜ್ಯದ ಅಗತ್ಯವಿರುವ ಪ್ರಮಾಣ 6,80,655 ಮೆ. ಟನ್ ಆಗಿದೆ. ಇದರಿಂದಾಗಿ ಇನ್ನೂ 1,65,541 ಮೆ. ಟನ್ ಯೂರಿಯಾ ಕಡಿಮೆ ಪೂರೈಕೆಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಪತ್ರದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ:
ಈ ಬಾರಿ ಮುಂಗಾರು ಬೇಗ ಪ್ರವೇಶವಾಗಿದ್ದು, ವಿವಿಧ ಬೆಳೆಗಳ ವ್ಯಾಪ್ತಿ ಹೆಚ್ಚಾಗಿದೆ.
ತುಂಗಭದ್ರಾ, ಕಾವೇರಿ ಮತ್ತು ಕೃಷ್ಣಾ ನದಿಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ನೀರಿನ ಮುಂಗಡ ಬಿಡುಗಡೆ ಆದ ಕಾರಣದಿಂದ ಬಿತ್ತನೆ ಕಾರ್ಯ ಶುರುವಾಗಿದ್ದು, ಯೂರಿಯಾ ಅವಶ್ಯಕವಾಗಿದೆ.
ಮೆಕ್ಕೆಜೋಳ ಬೆಳೆ ವ್ಯಾಪ್ತಿ 2 ಲಕ್ಷ ಹೆಕ್ಟೇರ್ ಹೆಚ್ಚಾಗಿ, ಇತರ ಬೆಳೆ ಪ್ರದೇಶ ಕಡಿಮೆಯಾಗಿದೆ. ಮೆಕ್ಕೆಜೋಳಕ್ಕೆ ಹೆಚ್ಚು ಯೂರಿಯಾ ಬೇಕಾಗುತ್ತದೆ.
ಸುಮಾರು 13,000 ಹೆಕ್ಟೇರ್ ಪೂರ್ವ-ಖರೀಫ್ ಪ್ರದೇಶವನ್ನು ಮತ್ತೆ ಬಿತ್ತಲಾಗಿದ್ದು, ಹೆಚ್ಚುವರಿ ಯೂರಿಯಾ ಅಗತ್ಯವಿದೆ.
ಯೂರಿಯಾ ಕೊರತೆಯಿಂದಾಗಿ ರೈತರಲ್ಲಿ ಅಸಮಾಧಾನ, ಅಶಾಂತಿ ಉಂಟಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದು. ಇದರಿಂದಾಗಿ ರಾಜ್ಯದ ಹಿತಕ್ಕಾಗಿ ತಕ್ಷಣವೇ ಅಗತ್ಯವಾದ ಯೂರಿಯಾ ಪೂರೈಕೆ ಮಾಡಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa