ರಾಯಚೂರು, 25 ಜುಲೈ (ಹಿ.ಸ.) :
ಆ್ಯಂಕರ್ : ಯಾವುದೇ ರೀತಿಯ ದೂರುಗಳು ಬಾರದ ಹಾಗೆ ಪ್ರತಿಯೊಂದು ಇಲಾಖೆಯಲ್ಲಿ ಆಯಾ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡುವಾಗ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಗೌರವಾನ್ವಿತ ಕರ್ನಾಟಕ ಉಪಲೋಕಾಯುಕ್ತರಾದ ಬಿ ವೀರಪ್ಪ ಅವರು ಇಲಾಖೆಗಳ ಅಧಿಕಾರಿಗಳಿಗೆ ಸಲಹೆ ಮಾಡಿದರು.
ರಾಯಚೂರ ಜಿಲ್ಲಾ ವ್ಯಾಪ್ತಿಯ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ವಿಲೇವಾರಿಯ ಬಗ್ಗೆ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಅಧಿಕಾರಿಗಳು ಒತ್ತಡಕ್ಕೆ ಮನಿದು ಅನರ್ಹರಿಗೆ ಅವಕಾಶ ಕೊಡುತ್ತಿದ್ದಾರೆ. ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳು ದೊರಕದೇ ಅನ್ಯಾಯವಾಗುತ್ತಿದೆ ಎಂದು ಸಾರ್ವಜನಿಕ ದೂರುಗಳು ಹೆಚ್ಚುತ್ತಿವೆ. ಅಧಿಕಾರಿಗಳಿಗೆ ಸಾಮಾಜಿಕ ಕಾಳಜಿ ಇರಬೇಕು. ಯಾರು ಎಷ್ಟೇ ಒತ್ತಡ ಹಾಕಿದರು ಸಹ ಅದನ್ನು ಪರಿಗಣಿಸದೇ ಸರ್ಕಾರದ ನಿಯಮಾವಳಿಯಂತೆ ಯೋಜನೆಗಳಿಗೆ ಅರ್ಹರನ್ನೇ ಆಯ್ಕೆ ಮಾಡಿ ಸಾಮಾಜಿಕ ನ್ಯಾಯ ಕಾಪಾಡಬೇಕು ಎಂದು ಉಪ ಲೋಕಾಯುಕ್ತರು ಸಲಹೆ ಮಾಡಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ರೋಗಿಗಳಿಗೆ ಅಲ್ಲಿನ ವೈದ್ಯರು ಖಾಸಗಿ ದವಾಖಾನೆಗೆ ಕಳುಹಿಸಕೂಡದು. ಚಿಕಿತ್ಸೆ ನೀಡಿದ ಬಳಿಕೆ ಔಷಧಿಯನ್ನು ಹೊರಗಡೆ ಪಡೆದುಕೊಳ್ಳಲು ರೋಗಿಗೆ ಸೂಚಿಸಬಾರದು. ಈ ವಿಷಯದ ಬಗ್ಗೆ ಗಮನ ಹರಿಸುವಂತೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುತ್ತೋಲೆ ರವಾನಿಸಿ ಸೂಚನೆ ನೀಡಬೇಕು. ಆಸ್ಪತ್ರೆಗಳಲ್ಲಿ ಅವಶ್ಯಕವಾದ ಸಿಟಿ ಸ್ಕ್ಯಾನ್, ಎಂಆರ್‍ಐ ಸ್ಕ್ಯಾನ್ ಮಷಿನ್‍ಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಉಪಲೋಕಾಯುಕ್ತರು ಡಿಎಚ್‍ಓ ಡಾ.ಸುರೇಂದ್ರಬಾಬು ಅವರಿಗೆ ನಿರ್ದೇಶನ ನೀಡಿದರು. ರಾಯಚೂರಿನ ರಾಜೀವಗಾಂಧಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಒಪೆಕ್ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಸಹ ಸರಿಯಾದ ನಿಯಮಗಳು ಪಾಲನೆ ಆಗಬೇಕು ಎಂದು ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ರಾಯಚೂರ ಜಿಲ್ಲಾ ವ್ಯಾಪ್ತಿಯ ಎಲ್ಲ ಮೆಟ್ರಿಕ್ ಪೂರ್ವ, ನಂತರದ ವಸತಿ ನಿಲಯಗಳು ಮತ್ತು ವೃತ್ತಿಪರ ಕೋರ್ಸಿನ ಎಲ್ಲ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಊಟ, ಉಪಹಾರ, ಸಮವಸ್ತ್ರ ಸೇರಿದಂತೆ ಇನ್ನೀತರ ಎಲ್ಲ ಸೌಕರ್ಯಗಳನ್ನು ಸಮರ್ಪಕವಾಗಿ ನೀಡಬೇಕು. ಅನಿರೀಕ್ಷಿತ ಭೇಟಿ ವೇಳೆ ಏನಾದರು ಲೋಪದೋಷಗಳು ಕಂಡುಬಂದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಇದೆ ವೇಳೆ ಉಪ ಲೋಕಾಯುಕ್ತರು ಸಂಬಂಧಿಸಿದ ಇಲಾಖೆಯ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ತುಂಬಾ ಮುಖ್ಯ. ಈ ದಿಶೆಯಲ್ಲಿ ಜಿಲ್ಲೆಯ ಪ್ರತಿಯೊಂದು ಅಂಗನವಾಡಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವಂತಾಗಬೇಕು. ತಾವು ರಾಯಚೂರ ಪ್ರವಾಸದಲ್ಲಿದ್ದಾಗ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಉಪಲೋಕಾಯುಕ್ತರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿ ಅಂಗನವಾಡಿ ಮೇಲೆ ಸೂಕ್ತ ಮೇಲ್ವಿಚಾರಣೆಗೆ ನಿರ್ದೇಶನ ನೀಡಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಜಾಗತಿಕವಾಗಿ ಮೆಚ್ಚುಗೆ ಗಳಿಸಿದ ಯೋಜನೆಯಾಗಿದೆ. ಈ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಕೃಷಿ ಕೂಲಿ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ನರೇಗಾ ಯೋಜನೆಯಡಿ ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಯಾವುದೇ ಕಾರಣಕ್ಕು ಜೆಸಿಬಿ ಮತ್ತು ಯಾವುದೇ ಯಂತ್ರವನ್ನು ಬಳಸಬಾರದು. ಕಡ್ಡಾಯವಾಗಿ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಒತ್ತು ಕೊಡಬೇಕು ಎಂದು ಉಪ ಲೋಕಾಯುಕ್ತರು ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ನಿರಂತರವಾಗಿರುತ್ತದೆ. ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳು ಇರುವುದಿಲ್ಲ. ವಿದ್ಯುತ್ ಪ್ರವರ್ತಕ (ಟಿ.ಸಿ)ಗಳು ಬೇಕು ಎಂದು ಎಷ್ಟೇ ಸಲ ಅಲೆದಾಡಿದರೂ ಸಕಾಲಕ್ಕೆ ಕೊಡುವುದಿಲ್ಲ ಎಂದು ಹಳ್ಳಿಯ ಜನರಿಂದ ದೂರುಗಳು ಹೆಚ್ಚುತ್ತಿವೆ. ಹೀಗಾಗಿ ಜೆಸ್ಕಾಂ ಅಧಿಕಾರಿಗಳು ಜಾಗೃತೆಯಿಂದ ಕೆಲಸ ಮಾಡಬೇಕು. ಗ್ರಾಮಸ್ಥರಿಗೆ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಹುತೇಕ ಕಡೆ ಸಾರ್ವಜನಿಕ ಕೆರೆ, ಬಾವಿ, ಸಾರ್ವಜನಿಕ ಸ್ಥಳಗಳನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡುತ್ತಿದ್ದು ಇದರಿಂದಾಗಿ ಸಾಕಷ್ಟು ತೊಂದರೆಯಾಗುತ್ತಿದೆ. ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಸ್ಥಳೀಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಲೋಕಾಯುಕ್ತ ಕಚೇರಿಯಲ್ಲಿ ಸಾಕಷ್ಟು ದೂರುಗಳು ಸಲ್ಲಿಕೆಯಾಗುತ್ತಿವೆ. ಈ ಬಗ್ಗೆ ವಿಶೇಷವಾಗಿ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಪಿಡಿಓಗಳು ಗಮನ ಹರಿಸಿ ಮೇಲಧಿಕಾರಿಗಳಿಗೆ ವರದಿ ಮಾಡಲು ಮುತುವರ್ಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ಪರಿಸರದ ಸಮತೋಲನ ಕಾಪಾಡುವಲ್ಲಿ ಗಿಡಮರಗಳ ಪಾತ್ರ ಅತೀ ಮಹತ್ವವಾಗಿದ್ದು ಅರಣ್ಯ ಅತೀಕ್ರಮಣಕ್ಕೆ ಕಡಿವಾಣ ಹಾಕಬೇಕು ಎಂದು ಉಪ ಲೋಕಾಯುಕ್ತರು, ಆರ್‍ಎಫ್‍ಓ ಅವರಿಂದ ಮಾಹಿತಿ ಪಡೆದುಕೊಂಡರು. ಅರಣ್ಯ ಅತೀಕ್ರಮಣದ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್