ರಾಯಚೂರು, 25 ಜುಲೈ (ಹಿ.ಸ.) :
ಆ್ಯಂಕರ್ : ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದ ಎಣ್ಣೆ ಕಾಳು (ಎನ್‍ಎಂಇಒ-ಒಎಸ್) ಯೋಜನೆಯಡಿ ಎಣ್ಣೆ ಕಾಳು ಕೊಯ್ಲೋತ್ತರ ಘಟಕಕ್ಕೆ ನೆರವು ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದ ಎಣ್ಣೆ ಕಾಳು ಯೋಜನೆಯಡಿ ಪ್ರಾಥಮಿಕ ಮತ್ತು ದ್ವಿತೀಯ ಎಣ್ಣೆ ಕಾಳು ಕೊಯ್ಲೋತ್ತರ ಘಟಕಕ್ಕೆ ಮೂಲ ಸೌಕರ್ಯ ಕಲ್ಪಿಸಲು, ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು, ಶುದ್ಧ ಖಾದ್ಯ ತೈಲ ಉಪಯೋಗಿಸಲು ಅನುಕೂಲವಾಗುವಂತೆ ಹಾಗೂ ಎಣ್ಣೆ ಕಾಳು ಬೆಳೆಗಳನ್ನು ಉತ್ತೇಜಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಯೋಜನಾ ವರದಿಯ ಶೇ.33ರಷ್ಟು ಅಥವಾ 9.99 ಲಕ್ಷ ರೂ. ಮೀರದಂತೆ ಸಹಾಯಧನ ಒದಗಿಸಲಾಗುವುದು. ಎಣ್ಣೆ ಕಾಳು ಕೊಯ್ಲೋತ್ತರ ಘಟಕಗಳಿಗೆ ಅವಶ್ಯವಿರುವ ಯಂತ್ರೋಪಕರಣ ಖರೀದಿಸಲು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು, ರೈತ ಉತ್ಪಾದಕ ಸಂಘಗಳು ವಿಸ್ತ್ರತ ಯೋಜನಾ ವರದಿಯೊಂದಿಗೆ ಜುಲೈ 31ರೊಳಗಾಗಿ ಅರ್ಜಿಯನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿ ರಾಯಚೂರಿನಲ್ಲಿ ಸಲ್ಲಿಸಬಹುದಾಗಿದೆ.
ಈ ಘಟಕದಲ್ಲಿ ಕಟ್ಟಡ ವೆಚ್ಚ ಮತ್ತು ಭೂಮಿ ಬಾಡಿಗೆ ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ಪರಿಶೀಲಿಸಿ, ಅರ್ಹ ಫಲಾನುಭವಿಯನ್ನು ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್