ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ : ಮುಖ್ಯಮಂತ್ರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಬೆಂಗಳೂರು, 23 ಜುಲೈ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಸಮಗ್ರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಹಿಂದುಳಿದ ವರ್ಗಗಳ ಆಯೋಗ ನೀಡಿದ ಪ್ರಸ್ತಾವನೆಯಂತೆ, ಸಮೀಕ್ಷೆ ಕೈಗೊಳ್ಳಲು ಸರ್ಕಾರ ತೀರ್ಮಾನ
Meeting


ಬೆಂಗಳೂರು, 23 ಜುಲೈ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಸಮಗ್ರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಹಿಂದುಳಿದ ವರ್ಗಗಳ ಆಯೋಗ ನೀಡಿದ ಪ್ರಸ್ತಾವನೆಯಂತೆ, ಸಮೀಕ್ಷೆ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ. ಈ ಸಮೀಕ್ಷೆಯು ರಾಜ್ಯದ ಸುಮಾರು 7 ಕೋಟಿಗೂ ಹೆಚ್ಚು ಜನರನ್ನು ಒಳಗೊಂಡಿರಲಿದೆ.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, “ಈ ಸಮೀಕ್ಷೆಯ ಪ್ರಮುಖ ಉದ್ದೇಶ ಜಾತಿ ತಾರತಮ್ಯ ನಿವಾರಣೆ ಮಾಡುವುದು. ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಹಿನ್ನಲೆ, ಜಮೀನಿನ ಮಾಲೀಕತ್ವ ಸೇರಿದಂತೆ ಸಮಗ್ರ ಮಾಹಿತಿ ಸಂಗ್ರಹವಾಗಬೇಕು. ಮುಂದಿನ ಬಜೆಟ್ ರೂಪಿಸುವ ಸಂದರ್ಭದಲ್ಲಿ ಈ ವರದಿ ಆಧಾರವಾಗಲಿದೆ,” ಎಂದು ವಿವರಿಸಿದರು.

ಸಮೀಕ್ಷೆ ಅವಧಿ ಹಾಗೂ ತಯಾರಿ:

ಸಮೀಕ್ಷೆಯನ್ನು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ 15 ದಿನಗಳ ಕಾಲ ನಡೆಸಲಾಗುತ್ತದೆ. ಅಕ್ಟೋಬರ್ ಕೊನೆಗೂ ಮುನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ಪಾರದರ್ಶಕವಾಗಿ ಹಾಗೂ ವೈಜ್ಞಾನಿಕ ರೀತಿಯಲ್ಲಿ ನಡೆಸಲಾಗುತ್ತದೆ.

ಮಾನವ ಸಂಪನ್ಮೂಲ ನಿಯೋಜನೆ:

ಈ ಸಮೀಕ್ಷೆ ಕಾರ್ಯಕ್ಕೆ ಸುಮಾರು 1.65 ಲಕ್ಷ ಗಣತಿದಾರರನ್ನು ನೇಮಿಸಲಾಗುವುದು. ಶಿಕ್ಷಕರ ಸೇವೆಯ ಜೊತೆಗೆ ಇತರ ಇಲಾಖೆಗಳ ಸಿಬ್ಬಂದಿಯನ್ನು ಸಹ ಸಮೀಕ್ಷೆ ಕಾರ್ಯಕ್ಕೆ ಬಳಸಲಾಗಲಿದೆ.

ತಜ್ಞರ ಸಮಿತಿ ನೆರವು : ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ತಜ್ಞರ ಸಮಿತಿ ಮೂಲಕ ಅಂತಿಮಗೊಳಿಸಲಾಗುವುದು. ಇದೇ ವೇಳೆ ತೆಲಂಗಾಣದಲ್ಲಿ ನಡೆಯುತ್ತಿರುವ ಸಮೀಕ್ಷೆಯ ಮಾದರಿಯ ಅಧ್ಯಯನಕ್ಕೂ ಸೂಚನೆ ನೀಡಲಾಗಿದೆ.

ಮೇಲ್ವಿಚಾರಣೆಗಾಗಿ ಉನ್ನತಮಟ್ಟದ ಸಮಿತಿ:

ಸಮೀಕ್ಷೆಯ ಮೇಲೆ ನಿಗಾ ಇಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತದೆ. ಸಮೀಕ್ಷೆ ಬಹುಪಾಲು ವಿಜ್ಞಾನಾಧಾರಿತವಾಗಿರಬೇಕು ಹಾಗೂ ಯಾರೂ ಹೊರಗುಳಿಯದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.

ಬೆಂಗಳೂರು ನಗರಕ್ಕೆ ಪ್ರತ್ಯೇಕ ಯೋಜನೆ:

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಮೀಕ್ಷೆ ಯಶಸ್ವಿಯಾಗಿ ನಡೆಯುವಂತೆ ವಿಶೇಷ ಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ಆರ್ ನಾಯ್ಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande