ಬೆಂಗಳೂರು, 18 ಜುಲೈ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರದ 40ಕ್ಕೂ ಹೆಚ್ಚು ಶಾಲೆಗಳಿಗೆ ಇಂದು ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಎಂ.ಎಸ್.ಧೋನಿ ಗ್ಲೋಬಲ್ ಸ್ಕೂಲ್, ಆರ್.ಆರ್. ನಗರ ಮತ್ತು ಕೆಂಗೇರಿ ಭಾಗದ ಹಲವು ಶಾಲೆಗಳಿಗೆ ಒಂದೇ ಇಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದೆ. “ಕಪ್ಪು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸ್ಫೋಟಕಗಳನ್ನು ಶಾಲಾ ಕೋಣೆಗಳಲ್ಲಿ ಇರಿಸಿದ್ದೇನೆ. ನನಗೆ ಜೀವನದ ಮೇಲೆ ಆಸಕ್ತಿ ಇಲ್ಲ. ನಾನು ಆತ್ಮಹತ್ಯೆಗೆ ಶರಣಾಗುತ್ತೇನೆ. ಈ ಇಮೇಲ್ ಮಾಧ್ಯಮಗಳಿಗೆ ಕಳಿಸಿಬಿಡಿ,” ಎಂಬಂತಿರುವ ಈ ಸಂದೇಶ, ರೋಡ್‌ಕಿಲ್ ಎಂಬ ನಾಮದಿಂದ ಕಳುಹಿಸಲಾಗಿದೆ.
ಬೆದರಿಕೆ ಎದುರಾದ ಶಾಲಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಹೆಚ್ಚಿನ ಭೀತಿ ತಪ್ಪಿಸಲು ಮಕ್ಕಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಈ ಹಿಂದೆ ಇಂತಹ ಅನಾಮಿಕ ಇಮೇಲ್ ಬೆದರಿಕೆಗಳು ಹಲವು ಬಾರಿ ಬಂದಿದ್ದು, ಎಲ್ಲವೂ ಸುಳ್ಳು ಅಣಕವಾಗಿದ್ದರೂ, ಪ್ರತಿ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಮುಖ್ಯಮಂತ್ರಿ ಪ್ರತಿಕ್ರಿಯೆ : ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದು ಹುಸಿ ಬಾಂಬ್ ಕರೆಯಿರಬಹುದೇ ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು. ಸುಳ್ಳು ಹೇಳಿ ಅಪಪ್ರಚಾರ , ಪ್ರಚೋದನೆಗೊಳಿಸುವ ಕೃತ್ಯಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಕಾನೂನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa