ಅವಳಿ ನಗರ ನೀರು ಪೂರೈಕೆಗೆ ಗಂಭೀರ ಕ್ರಮ ಆಗಲಿ : ಸಂಸದ ಬಸವರಾಜ ಬೊಮ್ಮಾಯಿ
ಗದಗ, 17 ಜುಲೈ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಅವಳಿ ನಗರಕ್ಕೆ ನಿರಂತರ ನೀರು ಪೂರೈಕೆ ಯೋಜನೆಗೆ 2017 ರಲ್ಲಿಯೇ ಲೋಕಾರ್ಪಣೆಗೊಳಿಸಲಾಗಿದೆ. ಆದರೂ ಸರಿಯಾಗಿ ವಾರ್ಡವಾರು ನಿರಂತರ ನೀರು ಪೂರೈಕೆ ಸಾಧ್ಯವಾಗಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಂಭೀರವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ರಾಜ
ಪೋಟೋ


ಗದಗ, 17 ಜುಲೈ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಅವಳಿ ನಗರಕ್ಕೆ ನಿರಂತರ ನೀರು ಪೂರೈಕೆ ಯೋಜನೆಗೆ 2017 ರಲ್ಲಿಯೇ ಲೋಕಾರ್ಪಣೆಗೊಳಿಸಲಾಗಿದೆ. ಆದರೂ ಸರಿಯಾಗಿ ವಾರ್ಡವಾರು ನಿರಂತರ ನೀರು ಪೂರೈಕೆ ಸಾಧ್ಯವಾಗಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಂಭೀರವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ( ದಿಶಾ) ಸಮಿತಿ ಸಭೆ ಹಾಗೂ ವಿವಿಧ ಇಲಾಖೆಗಳ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗದಗ ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆಗಾಗಿ ಈಗಾಗಲೇ ತುಂಗಭದ್ರಾ ಹಾಗೂ ಮಲಪ್ರಭಾ ನದಿಯಿಂದ ನೀರು ಪೂರೈಕೆಗೆ ಯೋಜನೆ ಸಿದ್ಧಪಡಿಸಿ ಅನುಷ್ಟಾನಗೊಳಿಸುವ ಮೂಲಕ ನಿರಂತರ ನೀರು ಒದಗಿಸಲು ಚಾಲನೆಯನ್ನು ನೀಡಲಾಗಿದ್ದರೂ ಸಹ ಈವರೆಗೂ ನಗರದ ಸಾರ್ವಜನಿಕರಿಗೆ ನಿಯಮಿತವಾಗಿ ನೀರು ಪೂರೈಕೆ ಸಾಧ್ಯವಾಗದಿರುವುದು ವಿಷಾದನೀಯ. ನೀರು ಪೂರೈಕೆಯಲ್ಲಿ ಇರುವ ಸಮಸ್ಯೆ ತಾತ್ಕಾಲಿಕ ಶೀಘ್ರ ಪರಿಹಾರಕ್ಕೆ ಯೋಜನೆ ರೂಪಿಸಿ ಅನುಷ್ಟಾನಗೊಳಿಸಲು ಈ ಹಿಂದಿನ ಸಭೆಯಲ್ಲಿಯೇ ಸೂಚಿಸಲಾಗಿತ್ತು. ಅಧಿಕಾರಿ ವರ್ಗ ಮಾತ್ರ ನೀಡಿರುವ ಸೂಚನೆಯನ್ನು ಪಾಲನೆ ಮಾಡುವಲ್ಲಿ ವಿಳಂಬ ಧೋರಣೆ ಕಂಡುಬರುತ್ತಿದೆ ಎಂದರು.

ಅವಳಿ ನಗರಕ್ಕೆ ನೀರು ಪೂರೈಕೆ ಕುರಿತಂತೆ ಶಾಸಕರಾದ ಸಿ.ಸಿ.ಪಾಟೀಲ ಹಾಗೂ ಎಸ್.ವಿ.ಸಂಕನೂರ ಅವರುಗಳೂ ಸಹ ಅಸಮರ್ಪಕ ನೀರು ಪೂರೈಕೆಯನ್ನು ಸರಿಪಡಿಸುವಂತೆ ಸಭೆಯಲ್ಲಿ ಸುದೀರ್ಫವಾಗಿ ಚರ್ಚಿಸಿದರು. ಇದಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಅವರು ತಾವು ಬಾಲ್ಯದಲ್ಲಿರುವಾಗಲೇ ಅಂದರೆ 1987 ರಿಂದಲೇ ಗದಗ ನೀರಿನ ಸಮಸ್ಯೆ ಕುರಿತು ಅರಿವಿದೆ. ಅದರ ಪರಿಹಾರಕ್ಕೆ ಇದುವರೆಗೂ ಸಾಧ್ಯವಾಗದಿರುವುದು ಅಧಿಕಾರಿ ವರ್ಗದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ವಸತಿ ಯೋಜನೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿ ಕೇಂದ್ರ ಪುರಸ್ಕೃತ ಯೋಜನೆಗಳ ಗುರಿ ಸಾಧನೆಗೆ ಅಧಿಕಾರಿವರ್ಗ ಕಾರ್ಯ ಪ್ರವೃತ್ತರಾಗಬೇಕು. ಆ ಮೂಲಕ ಪ್ರತಿ ಅರ್ಹ ಕುಟುಂಬಕ್ಕೂ ಸೂರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ನಿರ್ದೇಶಿಸಿದರು.

ಹಿಂದಿನ ಸಭೆಯಲ್ಲಿ ಸೂಚಿಸಿದ ಕಾರ್ಯಗಳನ್ನು ಸರಿಯಾಗಿ ಅನುಷ್ಟಾನಗೊಳಿಸಿ ವಿಶಿಷ್ಟ ಸಾಧನೆಯೊಂದಿಗೆ ಅಧಿಕಾರಿಗಳು ಸಭೆಗೆ ಆಗಮಿಸಬೇಕು. ಪ್ರತಿ ಸಭೆಯಲ್ಲಿ ನೀಡಿರುವ ಸೂಚನೆಗಳ ಪಾಲನೆ ಮಾಡಿ ಗದಗ ಜಿಲ್ಲೆ ಆರ್ಥಿಕ ಪ್ರಗತಿಯಲ್ಲಿ ಅಧಿಕಾರಿ ವರ್ಗವು ಭಾಗಿಯಾಗಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮೆಕ್ಕೆಜೋಳ ಬೆಳೆಯಲು ಅಧಿಕವಾಗಿ ಬಿತ್ತನೆ ಮಾಡಲಾಗಿದೆ.ಅದಕ್ಕಾಗಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಅಗತ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆ ಸೇರಿದಂತೆ ರಾಜ್ಯದ ಒಟ್ಟು ರಸಗೊಬ್ಬರದ ಬೇಡಿಕೆ ಪ್ರಸ್ತಾವನೆಯನ್ನುಕೇಂದ್ರಕ್ಕೆ ಸಲ್ಲಿಸಿ ಮಾಹಿತಿ ಒದಗಿಸಿದ್ದಲ್ಲಿ ರಸಗೊಬ್ಬರ ಪೂರೈಕೆಗೆ ಪ್ರಯತ್ನಿಸಲಾಗುವುದು ಎಂದರು.

ಸಭೆಯಲ್ಲಿ ವಸತಿ ಯೋಜನೆ, ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಉನ್ನತ ಶಿಕ್ಷಣ ವಿಷಯಗಳ ಕುರಿತಂತೆ ಸುದೀರ್ಘವಾಗಿ ಶಾಸಕರುಗಳಾದ ಡಾ.ಚಂದ್ರು ಲಮಾಣಿ, ಸಿ.ಸಿ.ಪಾಟೀಲ, ಎಸ್.ವಿ.ಸಂಕನೂರ ಚರ್ಚೆ ನಡೆಸಿದರು.

ನಗರಾಭಿವೃದ್ಧಿ ಇಲಾಖೆಯಿಂದ ಎಎಚ್‌ಪಿ ಯೋಜನೆಯಡಿ ಗದಗ ಬೆಟಗೇರಿ ಅವಳಿ ನಗರದಲ್ಲಿ 3630 ಮನೆಗಳ ನಿರ್ಮಾಣದಲ್ಲಿ ಒಂದನೇ ಹಂತದಲ್ಲಿ 1008 ಮನೆಗಳ ಪೈಕಿ 248 ಮನೆಗಳು ಪೂರ್ಣಗೊಂಡಿದ್ದು ಹಂಚಿಕೆ ಮಾಡಲಾಗಿದೆ. ಉಳಿದ 758 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ.ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (2015-2022) ಆರ್‌ಜಿಆರ್‌ಎಚ್‌ಸಿಎಲ್‌ದಿಂದ 7060 ಫಲಾನುಭವಿಗಳಿಗೆ ಅನುಮೋದನೆ ನೀಡಲಾಗಿದ್ದು 5066 ಮನೆಗಳು ಪೂರ್ಣಗೊಂಡಿವೆ. 1577 ಮನೆಗಳ ನಿರ್ಮಾಣ ಆರಂಭಿಸಲಾಗಿಲ್ಲ.

15 ನೇ ಹಣಕಾಸು ಯೋಜನೆಯಡಿ 2020-21 ರಿಂದ 2024-25 ರವರೆಗೆ ಜಿಲ್ಲೆಯ ಸ್ಥಳೀಯ ಸಂಸ್ಥೆ ಗಳಲ್ಲಿ 632 ಕಾಮಗಾರಿ ಮಂಜೂರಾಗಿದ್ದು 542 ಪೂರ್ಣಗೊಳಿಸುವ ಮೂಲಕ ಶೇ.85.76 ಭೌತಿಕ ಗುರಿ ಸಾಧನೆಯಾಗಿದೆ. ಆರ್ಥಿಕವಾಗಿ 9658 ಲಕ್ಷ ರೂ ಬಿಡುಗಡೆಯಾಗಿದ್ದು 6961.87 ಲಕ್ಷ ರೂ.ಗಳ ಅನುದಾನವನ್ನು ವೆಚ್ಚ ಮಾಡಲಾಗಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮೃತರಹಿತ ಪತ್ನಿಗೆ ವಿಧವಾ ವೇತನ, ಮನಸ್ವಿನಿ, ಮೈತ್ರಿ ಯೋಜನೆಗಳಡಿ ಒಟ್ಟು ಜಿಲ್ಲೆಯಲ್ಲಿ 1,62,230 ಫಲಾನುಭವಿಗಳಿದ್ದಾರೆ ಎಂದು ಸಭೆಗೆ ಮಾಹಿತಿ ಒದಗಿಸಿದರು.

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಪ್ರಸಕ್ತ ಸಾಲಿನ ಜೂನ್ ಅಂತ್ಯದವರಗೆ ಒಟ್ಟು 1,09,348 ಅರ್ಜಿಗಳು ಸ್ವೀಕೃತವಾಗಿದ್ದು ಅದರಲ್ಲಿ 1,08,219ಫಲಾನುಭವಿಗಳಿಗೆ ಗ್ಯಾಸ್ ಕನೆಕ್ಷನ್ ಒದಗಿಸಲಾಗಿದೆ. ಉಳಿದ ಅರ್ಜಿದಾರರಿಗೆ ಗ್ಯಾಸ್ ಕನೆಕ್ಷನ್ ಕೊಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 23 ಲಕ್ಷ ಮಾನವ ದಿನಗಳ ಸೃಜನೆಯ ವಾರ್ಷಿಕ ಗುರಿಯಲ್ಲಿ 10.63 ಲಕ್ಷ ಗುರಿ ಸಾಧನೆಯಾಗಿದೆ. ಅರ್ಥಿಕವಾಗಿ 135.50 ಕೋಟಿ ಗುರಿ ಪೈಕಿ 38.82 ಕೋಟಿ ಸಾಧನೆಯಾಗಿದೆ.

ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲೆಯಲ್ಲಿ 13884ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು 9436 ಶೌಚಾಲಯ ನಿರ್ಮಾಣ ಪೂರ್ಣಗೊಂಡಿದೆ. ಅದರಂತೆ ಬೂದು ನೀರು ನಿರ್ವಹಣೆಯಲ್ಲಿ 590 ಕಾಮಗಾರಿಗಳ ಗುರಿ ಹೊಂದಲಾಗಿದ್ದು 236 ಕಾಮಗಾರಿ ಪೂರ್ಣಗೊಳಿಸಲಾಗಿದೆ. 232 ಕಾಮಗಾರಿಗಳು ಪ್ರಗತಿಯಲ್ಲಿವೆ.

ಜೆಜೆಎಂ ಯೋಜನೆಯಡಿ ಕೈಗೊಂಡ 336 ಕಾಮಗಾರಿಗಳ ಪೈಕಿ 312 ಪೂರ್ಣಗೊಳಿಸಲಾಗಿದೆ. ಆರ್ಥಿಕವಾಗಿ 346.09 ಕೋಟಿ ರೂ ಮೊತ್ತದ ಪೈಕಿ 243.13 ಕೋಟಿ ಬಿಡುಗಡೆಯಾಗಿದ್ದು ವೆಚ್ಚವಾಗಿದೆ. ಪ್ರಧಾನ ಮಂತ್ರಿ ಆವಾಸ್ (ಗ್ರಾಮೀಣ)ಯೋಜನೆಯಡಿ 2016-17 ರಿಂದ 2019-20 ರವರೆಗೆ ಒಟ್ಟು 5748 ಆಯ್ಕೆ ಮಾಡಲಾದ ಫಲಾನುಭವಿಗಳ ಪೈಕಿ 4924 ಫಲಾನುಭವಿಗಳ ಮನೆಗಳು ಪೂರ್ಣಗೊಂಡಿವೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2019-20 ನೇ ಸಾಲಿನಿಂದ ಜಿಲ್ಲೆಯಲ್ಲಿ 38 ಕಾಮಗಾರಿಗಳು ಮಂಜೂರಾಗಿದ್ದು ಒಟ್ಟು 167.28 ಕಿ.ಮೀ ಗಳಲ್ಲಿ 161.40 ಕಿ.ಮೀ ರಸ್ತೆ ಪೂರ್ಣಗೊಳಿಸಲಾಗಿದೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande