ವಿಜಯಪುರ, 17 ಜುಲೈ (ಹಿ.ಸ.) :
ಆ್ಯಂಕರ್ : ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಖಾತೆ ಬದಲಾವಣೆ ಮಾಡಲು ಪೌತಿ-ವಾರಸಾ ಖಾತೆ ಆಂದೋಲನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ತಿಳಿಸಿದ್ದಾರೆ.
ಮಾಲೀಕತ್ವವು ಮೃತರ ವಾರಸುದಾರರ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ, ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಪೌತಿ-ವಾರಸಾ ಸ್ವರೂಪದ ಮ್ಯುಟೇಷನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಿ ಪೌತಿ-ವಾರಸಾ ಖಾತೆ ಆಂದೋಲನ ನಡೆಸಲಾಗುತ್ತಿದೆ. ಅಂತಹ ವಾರಸುದಾರರಿಗೆ ಸರ್ಕಾರದಿಂದ ಸಿಗಬಹುದಾದ ಹಲವಾರು ಪ್ರಯೋಜನಗಳಿಂದ ಹಾಗೂ ಜಮೀನು ಅಭಿವೃದ್ಧಿಗೆ ಸಂಬ0ಧಿಸಿದ ಸಾಲ ಸೌಲಭ್ಯ, ಬೆಳೆ ಹಾನಿ ಪರಿಹಾರ, ಬೆಳೆ ವಿಮೆಯಂತಹ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮೃತರ ವಾರಸುದಾರರ ಮನೆ ಬಾಗಿಲಿಗೆ ಆಗಮಿಸಿ, ಇ-ಪೌತಿ-ವಾರಸಾ ಖಾತೆಯನ್ನು ದಾಖಲಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ವಾರಸುದಾರರು ಅಗತ್ಯ ದಾಖಲೆಗಳಾದ ವಂಶ ವೃಕ್ಷ ಮತ್ತು ಮಹಜರ್ ಅಥವಾ ಪಂಚನಾಮಾ, ಎಲ್ಲ ವಾರಸುದಾರರ ಆಧಾರ್ ಕಾರ್ಡ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. ಇ-ಕೆವೈಸಿಗಾಗಿ ಆಧಾರ ಕಾರ್ಡಿಗೆ ನೋಂದಾಯಿಸಿಕೊ0ಡಿರುವ ಮೊಬೈಲ್‌ಗೆ ಸ್ವೀಕರಿಸುವ ಒಟಿಪಿ ನೀಡುವುದು.
ವಿಜಯಪುರ-3856, ತಿಕೋಟಾ-2947, ಬಬಲೇಶ್ವರ-5876, ಬಸವನ ಬಾಗೇವಾಡಿ-7232, ನಿಡಗುಂದಿ-3371, ಕೋಲ್ಹಾರ-2399, ಮುದ್ದೇಬಿಹಾಳ-10037, ತಾಳಿಕೋಟೆ-5627, ಇಂಡಿ-7177, ಚಡಚಣ-3751, ಸಿಂದಗಿ-3955, ಆಲಮೇಲ-3071 ಹಾಗೂ ದೇವರಹಿಪ್ಪರಗಿ-3075 ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 62,374 ಪ್ರಕರಣವನ್ನು ಪೌತಿ-ವಾರಸಾ ಖಾತೆಗಾಗಿ ಗುರುತಿಸಲಾಗಿದೆ. ಪೌತಿ-ವಾರಸಾ ಆಂದೋಲನಾ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande