ವಿಜಯಪುರ, 17 ಜುಲೈ (ಹಿ.ಸ.) :
ಆ್ಯಂಕರ್ : ಬಹು ಆರೋಗ್ಯ ಸಮಸ್ಯೆ ಹೊಂದಿದ್ದ 90 ವರ್ಷದ ಹಿರಿಯ ಮಹಿಳೆಗೆ ಎಡಚಪ್ಪೆಯ ಮರುಜೋಡಣೆ ಮಾಡುವ ಮೂಲಕ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರು ಗಮನ ಸೆಳೆದಿದ್ದಾರೆ.
ನಗರದ ಅರವಳಿಕೆ ಹಿರಿಯ ತಜ್ಞ ಡಾ. ಜ್ಞಾನೇಳ್ವಪ ಪಂಡಿತ ಅವರ 90 ವರ್ಷದ ತಾಯಿ ಕಾಲು ಜಾರಿ ಬಿದ್ದ ಪರಿಣಾಮ ಎಡಚಪ್ಪೆ ಮುರಿದುಕೊಂಡಿದ್ದರು.
ಆಗ ಡಾ. ಜ್ಞಾನೇಶ್ವರ ಪಂಡಿತ ಅವರು ತಮ್ಮ ಆರೋಗ್ಯದ ಕುರಿತು ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಆರ್ಥೊಪೆಡಿಕ್ ವೈದ್ಯ ಡಾ. ಗಿರೀಶ ಖೋದ್ನಾಪುರ ಅವರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಪಂದಿಸಿದ ವೈದ್ಯರು ರೋಗಿಯ ಮನೆಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಈ ಮಧ್ಯೆ 90 ವರ್ಷದ ರೋಗಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಫೇಸ್ ಮೇಕರ್(ಹೃದಯ ಬಡಿತ ಸಂಬಂಧಿ ಯಂತ್ರ) ಅಳವಡಿಸಿರುವುದು ಮತ್ತು ಬಿಪಿ ಹಾಗೂ ಶುಗರ್ ಕೂಡ ಇರುವ ಕಾರಣ ಚಿಕಿತ್ಸೆ ಕ್ಲಿಷ್ಟಕರವಾಗಿರುವುದು ಗಮನಮಕ್ಕೆ ಬಂದಿದೆ.
ಆಗ ಡಾ. ಗಿರೀಶ ಖೋದ್ನಾಪುರ ಅವರು ಶಸ್ತ್ರಚಿಕಿತ್ಸೆಯ ಅಗತ್ಯತೆಯ ಬಗ್ಗೆಯೂ ರೋಗಿಯ ಪುತ್ರನಿಗೆ ತಿಳಿಸಿದ್ದಾರೆ. ಮರುದಿನ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ನೇತೃತ್ತವದ ಮೆಡಿಸೀನ್ ವಿಭಾಗದ ವೈದ್ಯರ ತಂಡ ತಪಾಸಣೆ ನಡೆಸಿದೆ.
ಆಸ್ಪತ್ರೆಗೆ ದಾಖಲಾದ ಮೂರನೇ ದಿನ ಡಾ. ವಿಜಯಕುಮಾರ ಕಲ್ಯಾಣಪ್ಪಗೊಳ ನೇತೃತ್ವದ ಡಾ. ಬಸವರಾಜ್ ಪಾಟೀಲ, ಡಾ. ರೇಣುಕಾ ಬಿರಾದಾರ, ಡಾ. ವಿದ್ಯಾ ತಂಬಾಕೆ ಅವರನ್ನೊಳಗೊಂಡ ಅರವಳಿಕೆ ವೈದ್ಯರ ತಂಡ ರೋಗಿಗೆ ಅನಸ್ತೇಶಿಯಾ ನೀಡಿದೆ. ಬೆಂಗಳೂರಿನಿಂದ ಆಗಮಿಸಿದ್ದ ಪೇಸ್ಮೇಕರ್ ತಂತ್ರಜ್ಞರ ಸಹಕಾರದೊಂದಿಗೆ ಡಾ. ಗಿರೀಶ ಖೋದ್ನಾಪುರ ಅವರು ವೃದ್ಧೆಯ ಎಡಭಾಗದ ಎಲುಬಿನಲ್ಲಿ ಬೈಪೋಲಾರ್ ಇಂಪ್ಲಾಂಟ್ ನ್ನು ಕೇವಲ 25 ನಿಮಿಷಗಳಲ್ಲಿ ನಿಖರವಾಗಿ ಅಳವಡಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಸ್ವತಃ ವೈದ್ಯರೂ ಆಗಿರುವ ಡಾ. ಜ್ಞಾನೇಶ್ವರ ಪಂಡಿತ ಈ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ತಾಯಿಗೆ ಮರುಜನ್ಮ ನೀಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಸಂತೋಷ ನಂದಿ, ಡಾ. ಶ್ರೀಪಾದ ಕುಲಕರ್ಣಿ, ಡಾ. ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಹಾಗೂ ಆಸ್ಪತ್ರೆಯ ಎಲ್ಲ ಸುಶ್ರೂಷಕ ಮತ್ತು ಇತರ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande