ಗದಗ, 17 ಜುಲೈ (ಹಿ.ಸ.) :
ಆ್ಯಂಕರ್ : ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಗದಗದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತ, ತಮ್ಮ ಹಾಗೂ ಜನಾರ್ದನ ರೆಡ್ಡಿಯ ನಡುವಿನ ಸಂಬಂಧ ಮತ್ತು ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ನಮ್ಮ ನಡುವೆ ಯಾವುದೇ ಗೊಂದಲವಿಲ್ಲ. ಆಗಾಗಿನ ಪರಿಸ್ಥಿತಿಯಿಂದಾಗಿ ಮಾತಿನಿಂದು ಭಿನ್ನಾಭಿಪ್ರಾಯ ಉಂಟಾಗಿದ್ದರೂ, ನಾವು ಮತ್ತೆ ಒಂದಾಗಿ ಪಕ್ಷದ ಹಿತಕ್ಕಾಗಿ ಕೆಲಸ ಮಾಡಬೇಕಾದ ಸಮಯ ಬಂದಿದೆ ಎಂದು ಅವರು ತಿಳಿಸಿದರು.
ನಾನು ಅಥವಾ ರೆಡ್ಡಿ ಯಾರೇ ಆಗಿರಲಿ, ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ಒಂದಾಗಿ ಚುನಾವಣೆ ಎದುರಿಸಬೇಕಾಗಿದೆ. ರಾಜಕೀಯದಲ್ಲಿ ವೈಯಕ್ತಿಕ ಭಾವನೆಗಳಿಗಿಂತಲೂ ಪಕ್ಷದ ಬಲವರ್ಧನೆ ಮುಖ್ಯ ಎಂದರು.
ಅವರು ಮುಂದುವರೆದು, ಎಲ್ಲರೂ ಒಂದಾದರೆ ಜನಾರ್ದನ ರೆಡ್ಡಿ ಮತ್ತು ರಾಮುಲು ಬೇರೆ ಅಲ್ಲ, ಒಂದಾಗ್ತಾರೆ. ನಾವು ಹಿಂದೆ ಬಾಯಿ ಮಾಡಿಕೊಂಡಿದ್ದೇವೆ, ಆದರೆ ಈಗ ಬಾಯಿಗೂ ಕೂಡಿ, ಮನಸ್ಸಿಗೂ ಕೂಡಿ ಪಕ್ಷವನ್ನು ಬಲಪಡಿಸೋ ಸಮಯ ಬಂದಿದೆ ಎಂಬುದಾಗಿ ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ರಾಜ್ಯದ ಮುಖ್ಯಮಂತ್ರಿ ಯಾರು? ಸಿದ್ದರಾಮಯ್ಯನಾ ಅಥವಾ ಸುರ್ಜೇವಾಲಾನಾ? ಎಂದು ಪ್ರಶ್ನಿಸಿದರು. ದೆಹಲಿಯಿಂದ ಬಂದು ಉಸ್ತುವಾರಿಗಳು ಶಾಸಕರನ್ನು, ಸಚಿವರನ್ನು ಕರೆದು ಮೀಟಿಂಗ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಕಿಮ್ಮತ್ತು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೇ ಈ ಸರ್ಕಾರ ಕೊಮಾ ಸ್ಥಿತಿಯಲ್ಲಿ ಇದೆ. ಆಕ್ಸಿಜನ್ ತೆಗೆದ್ರೆ ಬಿದ್ದು ಹೋಗುತ್ತೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಮಂತ್ರಿಗಳಿಗೆ ಅನುದಾನ ಸಿಗುತ್ತಿಲ್ಲ. ಶಾಸಕರಲ್ಲಿ ಅಸಮಾಧಾನ ಬೆಳವಣಿಗೆಯಾಗಿದೆ ಎಂದು ತೀವ್ರ ವಾಗಿ ಟೀಕಿಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕುರಿತಂತೆ ಅವರು, ಸದ್ಯಕ್ಕೆ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಅವಧಿ ಮುಗಿದ ಮೇಲೆ ಪಾರ್ಟಿ ತೀರ್ಮಾನ ಕೈಗೊಳ್ಳಲಿದೆ. ದಲಿತರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ವಾತಾವರಣ ಪಾರ್ಟಿಯಲ್ಲಿ ಇದೆ ಎಂಬುವುದಾಗಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP