ಜಮ್ಮು, 17 ಜುಲೈ (ಹಿ.ಸ.) :
ಆ್ಯಂಕರ್ : ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಜುಲೈ 17ರಂದು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.
ಪಹಲ್ಗಾಮ್ ಮತ್ತು ಬಾಲ್ಟಾಲ್ ಮೂಲ ಶಿಬಿರಗಳಿಂದ ಪವಿತ್ರ ಗುಹೆಯತ್ತ ನಡೆಯುವ ಯಾತ್ರೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಭಾರೀ ಮಳೆಯಿಂದಾಗಿ ಯಾತ್ರಾ ಮಾರ್ಗಗಳು ಹಾನಿಗೊಂಡಿರುವ ಹಿನ್ನೆಲೆಯಲ್ಲಿ ತಕ್ಷಣದ ದುರಸ್ತಿ ಕಾರ್ಯ ನಡೆಯುತ್ತಿದೆ. ಗಡಿ ರಸ್ತೆ ಸಂಘಟನೆ ಯಂತ್ರಸಾಮಗ್ರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದು, ಜುಲೈ 18 ರಂದು ಯಾತ್ರೆ ಪುನರಾರಂಭವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರ ವಿಭಾಗೀಯ ಆಯುಕ್ತ ವಿಜಯ್ ಕುಮಾರ್ ಬಿಧುರಿ ಈ ಸ್ಥಗಿತವನ್ನು ದೃಢಪಡಿಸಿದ್ದು, ಹವಾಮಾನ ಅನೂಕೂಲವಾದರೆ ನಾಳೆಯಿಂದ ಯಾತ್ರೆ ಮರುಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಪಂಜತರ್ಣಿ ಶಿಬಿರದಲ್ಲಿದ್ದ ಯಾತ್ರಾರ್ಥಿಗಳಿಗೆ ಮಾತ್ರ ಬಾಲ್ಟಾಲ್ ಕಡೆಗೆ ಸಾಗಲು ಹಾಗೂ ಪರ್ವತ ರಕ್ಷಣಾ ತಂಡಗಳ ನೆರವಿನಿಂದ ಅವಕಾಶ ನೀಡಲಾಗಿದೆ.
ಈ ವರ್ಷದ ಯಾತ್ರೆ ಜುಲೈ 3ರಂದು ಪ್ರಾರಂಭವಾಗಿದ್ದು, ಇದುವರೆಗೆ 2.35 ಲಕ್ಷಕ್ಕೂ ಹೆಚ್ಚು ಭಕ್ತರು ಬಾಬಾ ಬರ್ಫಾನಿ ದರ್ಶನ ಪಡೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa