ಬಳ್ಳಾರಿ, 11 ಜುಲೈ (ಹಿ.ಸ.) :
ಆ್ಯಂಕರ್ : ಎನ್. ತಿಪ್ಫಣ್ಣರವರು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದ ಶರಣ ದಂಪತಿಗಳಾದ ಶ್ರೀರುದ್ರಣ್ಣ ಮತ್ತು ಶ್ರೀಮತಿ ಹಂಪಮ್ಮ ಇವರ ಪ್ರೀತಿಯ ಕಂದನಾಗಿ ೧೯೨೮ ರ ನವೆಂಬರ್ ಮಾಹೆಯಲ್ಲಿ ಜನಿಸಿದರು. ಶ್ರೀಯುತರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ತುರುವನೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಪ್ರೌಡ ಶಿಕ್ಶಣವನ್ನು ಚಿತ್ರದುರ್ಗದಲ್ಲಿ, ಇಂಟರ್ ಮೀಡಿಯಟ್ ಶಿಕ್ಷಣವನ್ನು ದಾವಣಗೆರೆಯಲ್ಲಿ, ಬಿ.ಎ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜನಲ್ಲಿ ಮುಗಿಸಿ,ಎಲ್.ಎಲ್.ಬಿ ಪದವಿಯನ್ನು ಬೆಂಗಳೂರಿನ ಬಿ.ಎಲ್ ಸರ್ಕಾರಿ ಕಾಲೇಜಿನಿಂದ ಪಡೆದುಕೊಂಡರು.ತೀ.ನಂ.ಶ್ರೀ, ಎಲ್. ಬಸವರಾಜು, ಡಾ.ಎಸ್. ಶ್ರೀ ಕಂಠಶಾಸ್ತ್ರಿಗಳು ಕುವೆಂಪು, ಎಸ್.ವಿ ಪರಮೇಶ್ವರ ಭಟ್ಟ, ಎಂ.ವಿ. ಸೀತಾರಾಮಯ್ಯ, ಎಲ್. ಬಸವರಾಜು, ಎಂ.ವಿ. ಕೃಷ್ಣರಾವ್, ಪಿ.ಎಲ್. ಡಿಸೋಜ, ಡಾ.ಸಿ.ಆರ್ ರೆಡ್ಡಿ ಮುಂತಾದ ವಿದ್ವಾಂಸರ ಮಾರ್ಗದರ್ಶನದಲ್ಲಿ ಬೆಳೆದ ಶ್ರೀಯುತರಿಗೆ ಸಾಹಿತ್ಯ ಶಿಕ್ಷಣ ಸಮಾಜ ಸೇವೆ ವಚನ ಸಾಹಿತ್ಯ ಕಾನೂನು ಈ ಕ್ಷೇತ್ರದಲ್ಲಿಸಹಜವಾಗಿಯೇ ಆಸಕ್ತಿ ಮೂಡಿತು.
ವ್ರತ್ತಿ ಮತ್ತು ಸಾಧನೆ
ವಕೀಲ ವೃತ್ತಿಯನ್ನು ಆರಿಸಿಕೊಂಡ ಶ್ರೀಯುತರು ಬಳ್ಳಾರಿಯಲ್ಲಿ ಸೇವೆ ಪ್ರಾರಂಭಿಸಿದರು. ೧೦ ವರ್ಷಗಳ ಕಾಲ ಪ್ರಾಸಿಕ್ಯೂಟರ್ ಆಗಿ, ನಂತರ ಸರ್ಕಾರಿ ಫ್ಲೀಡರ್ ಆಗಿ ಸೇವೆ ಸಲ್ಲಿಸಿದರು ಶ್ರೀ. ಆರ್.ಜಿ ದೇಸಾಯಿಯವರು ಸೆಷೆನ್ಸ್ ನ್ಯಾಯದೀಶರಾಗಿದ್ದಾಗ ಅವರಿಗೆ ವೈಟ್ ಗ್ಲೋಸ್(ಬಿಳಿಯ ಕೈಗವಸು) ಸಮರ್ಪಿಸುವ ಗೌರವಕ್ಕೆ ಪಾತ್ರರಾದರು.೧೯೮೨ ರಲ್ಲಿ ತಿಪ್ಪಣ್ಣನವರು ಬಾರ್ ಕೌನ್ಸಿಲ್ ಅಧ್ಯಕ್ಶರಾದರು. ವಕೀಲರ ಕಲ್ಯಾಣ ನಿಧಿಯನ್ನು ಸ್ಥಾಪಿಸಿದರು. ಸಮಾಜದ ದುರ್ಬಲ ವರ್ಗದವರ ಉಚಿತ ಕಾನೂನು ನೆರವಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರಚಿಸಿದರು. ಎನ್. ತಿಪಣ್ಣನವರು ಕೇಂದ್ರ ವಾರ್ತಾ ಇಲಾಖೆಯ ಎಫ಼್.ಸಿ.ಎ.ಟಿ (ಫ಼ಿಲ್ಮ್ ಸೆನ್ಸರ್ ಅಪ್ಪಲೈಟ್ ಟ್ರಿಬುನಲ್) ಸಧಸ್ಯರಾಗಿ ಸೇವೆ ಸಲ್ಲಿಸಿದರು. ಅಮೃತಸರದ ಸುವರ್ಣ ಮಂದಿರದ ಮೇಲೆ ನಡೆದ 'ಆಪರೇಶನ್ ಬ್ಲೂಸ್ಟಾರ್' ದಾಳಿಯನ್ನಾದರಿಸಿದ ಪಂಜಾಬ್ ವೀಡಿಯೋ ಚಿತ್ರದ ಬಗ್ಗೆ ಬರೆದ ತೀರ್ಮಾನ ಸುಪ್ರೀಮ್ ಕೋರ್ಟ್ ನ್ಯಾಯಧೀಶರ ಪ್ರಶಂಸೆಗೆ ಪಾತ್ರವಾಯಿತು.
ಶ್ರೀಯುತರ ರಾಜಕೀಯ ಸೇವೆ
೯೦ ರ ದಶಕದಲ್ಲಿ ರಾಜಕೀಯ ಪ್ರವೇಶಿಸಿ ವಿಧಾನಸಭಾ ಲೋಕಸಭಾ ಚುನಾವಾಣೆಗಳಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು. ನಂತರ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ೧೨ ವರ್ಷ ಸೇವೆ ಸಲ್ಲಿಸಿದರು. ಪರಿಷತ್ತಿನ ಲೆಕ್ಕಪತ್ರ ಸಮಿತಿ, ಕಂದಾಯ ಉಪ ಸಮಿತಿ ಅಧ್ಯಕ್ಷರಾಗಿ, ಅರಣ್ಯ ಮತ್ತು ಪರಿಸರ ಸಮಿತಿಗಳ ಅಧ್ಯಕ್ಷರಾಗಿ ಕೆಲಸ ಮಾಡಿದರು. ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ಉಪನಾಯಕರಾಗಿಯೂ ,,ಕನ್ನಡ ವಿಶ್ವವಿದ್ಯಾಲಯ ಹಂಪಿ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು
ವೀರಶೈವ ವಿದ್ಯಾವರ್ಧಕ ಸಂಘದ ಸೇವೆ
ವೀ.ವಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಾಲಾ ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷರಾಗಿ ಕಾರ್ಯದರ್ಶಿಯಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ವೀ ವಿ ಸಂಘದ ಕಾರ್ಯದರ್ಶಿಯಾಗಿದ್ದ ಕಾಲಾವಧಿಯಲ್ಲಿ ಬಳ್ಳಾರಿ ನಗರದಲ್ಲಿ ಮಾತ್ರ ವಿದ್ಯಾಸಂಸ್ಥೆಗಳಿದ್ದವು.ನಂತರ ಇವರು, ವೀ ವಿ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಅಲ್ಲಂ ಕರಿಬಸಪ್ಪ ಇವರ ಸಹಕಾರದೊಂದಿಗೆ ಮುನಿರಾಬಾದ್ ನಲ್ಲಿ ಒಂದು ಹೈಸ್ಕೂಲು, ಹೊಸಪೇಟೆಯಲ್ಲಿ ವಿಜಯನಗರ ಕಾಲೇಜು ಪ್ರಾರಂಭಿಸಿದರು. ಅದರ ಉದ್ಘಾಟನೆಗೆ ಅಂದಿನ ಉಪರಾಷ್ತ್ರಪತಿ ಶ್ರೀಝಾಕಿರ್ ಹುಸೇನ್ ಮತ್ತು ಅಧ್ಯಕ್ಷತೆಗೆ ಶಿಕ್ಷಣ ಸಚಿವ ಎಸ್.ಆರ್ ಕಂಠಿಯರವರನ್ನು ಆಹ್ವಾನಿಸಿದ್ದರು,ಕೊಟ್ಟೂರಿನಲ್ಲಿ ಕೊಟ್ಟುರೇಶ್ವರ ಕಾಲೇಜನ್ನು ಪ್ರಾರಂಭಿಸಿದರು. ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯಲ್ಲಿ ಪ್ರೌಢಶಾಲೆಯನ್ನು ಪ್ರಾರಂಸಿಧರು. ಹೂವಿನ ಹಡಗಲಿಯಲ್ಲಿ ರಾಜ್ಯಪಾಲ ಧರ್ಮವೀರ ಅವರಿಂದ ಗಂಗಾವತಿ ಭಾಗ್ಯಮ್ಮ ರೂರಲ್ ಕಾಲೇಜ್ ಪ್ರಾರಂಭಿಸಿದರು.. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಎ.ಎಸ್ ಅಡಿಕೆಯವರು ವಹಿಸಿದ್ದರು. ಬಳ್ಳಾರಿಯಲ್ಲಿ ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯ ಪ್ರಾರಂಬಿಸಿದ ಕೀರ್ತಿ ಇವರದ್ದಾಗಿದೆ, ಕರ್ನಾಟಕ ವಿಶ್ವವಿದ್ಯಾಲಯವು ಕಾನೂನು ಕಾಲೇಜುಗಳ ಸ್ಥಾಪನೆಗೆ ಸಂಬಂದಿಸಿದಂತೆ ಲೋಕಲ್ ಇನ್ಸ್ಟಿಟ್ಯೂಟ್ ಕಮಿಟಿ ಆಫ಼್ ಲಾ ಕಾಲೇಜಸ್ ಎಂಬ ಸಮಿತಿಗೆ ಅಧ್ಯಕ್ಶರಾಗಿದ್ದಾಗ ಸಿರ್ಸಿ, ರಾಯಚೂರು, ಬೀದರ್, ಬಾಗಲ್ ಕೋಟೆ ಮತ್ತು ಅನೇಕ ಕಡೆ ಕಾನೂನು ಕಾಲೇಜುಗಳನ್ನು ಸ್ಠಾಪಿಸಲು ಅನುಮತಿ ಕೊಟ್ಟರು.ಇದರಿಂದಾಗಿ ಬಳ್ಳಾರಿಯಲ್ಲಿ ವುಂಕಿ ಸಣ್ಣರುದ್ರಪ್ಪ ಕಾನೂನು ಕಾಲೇಜನ್ನು ಪ್ರಾರಂಭಿಸಿದರು. ಆ ಕಾಲೇಜಿನಲ್ಲಿ ಗೌರವ ಉಪನ್ಯಾಸಾಕರಾಗಿ,ಸೇವೆ ಸಲ್ಲಿಸಿದರು. ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜನ್ನು ಬಳ್ಳಾರಿಯಲ್ಲಿ ಸ್ಥಾಪಿಸಿದರು. ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲನ್ನು ಸ್ಠಾಪಿಸಿದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ಸ್ಠಾಪಿಸಿದರು. ಎಂ.ಬಿ.ಎ ಕೋರ್ಸ್, ಪಾಲಿಟೆಕ್ನಿಕ್ ಹೊಸಪೇಟೆಯಲ್ಲಿ ಪ್ರೌಢದೇವರಾಯ ಇಂಜಿನಿಯರಿಂಗ್ ಕಾಲೇಜು ಹೀಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಬಿಸಿದ ಕೀರ್ತಿ ಶ್ರೀಯುತರಾದ್ದಾಗಿತ್ತು.
ತಿಪ್ಪಣ್ಣ ಎಂಬ ಬಹುಮುಖಿ ವ್ಯಕ್ತಿತ್ವ
ಶ್ರೀಯುತರದು ಬಹುಮುಖಿ ವ್ಯಕ್ತಿತ್ವ ಅವರು ಕೇವಲ ವ್ಯಕ್ತಿಯಾಗಿರಲಿಲ್ಲ ವೀರಶೈವ ಸಮಾಜದ ಒಂದು ಶಕ್ತಿಆಗಿದ್ದರು, ಅಖಿಲ ಭಾರತ ವೀರಶೈವ ಮಹಾಸಭಾವನ್ನು ಕಟ್ಟಿ ಬೆಳೆಸಿವಲ್ಲಿ ಅವರ ಪಾತ್ರ ಹಿರಿದಾದದ್ದು, ರಾಷ್ಟ್ರದ್ಯಕ್ಷರಾಗಿ ಸಲ್ಲಿಸಿದ ಸೇವೆ ಅನುಪಮ, ಶರಣ ಸಾಹಿತ್ಯ ಕುರಿತು ಸಾವಿರಾರು ಕಾರ್ಯಕ್ರಮಗಳನ್ನು ಚಿಂತನಾಗೋಷ್ಠಿಗಳನ್ನು ಆಯೋಜಿದ್ದರು, ತಿಪ್ಪಣ್ಣನವರ ೭೭ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಗೆಳೆಯರು ಮತ್ತು ಹಿತೈಷಿಗಳ ಶುಭ ಹಾರೈಕೆಯೊಂದಿಗೆ ಬೃಹತ್ ಸಮಾರಂಭ ಬಳ್ಳಾರಿಯಲ್ಲಿ ಜರಗಿತ್ತು ಅದರಲ್ಲಿ ಡಾ. ಮಲ್ಲಿಕಾರ್ಜುನ್ ಮನ್ಸೂರ್ , ಆರ್.ಸಿ. ಹಿರೇಮಠ್, ಡಾ. ಎಂ.ಎಂ ಕಲಬುರ್ಗಿ, ಜಸ್ಟೀಸ್ ಶ್ರೀಧರ್ ರಾವ್, ಜಸ್ಟೀಸ್ ಮಂಜುಳ ಚಲ್ಲೂರ್,ಮುಂತಾದ ಗಣ್ಯರು ಶ್ರೀ ದೇವೇಗೌಡರು,ಶ್ರೀ ಎಂ.ಪಿ ಪ್ರಕಾಶ್, ಶ್ರೀ ಸಿಧ್ದರಾಮಯ್ಯ ಮುಂತಾದ ರಾಜಕೀಯ ಮುತ್ಸದ್ದಿಗಳು ಆಗಮಿಸಿದ್ದರು, ಆ ಸಮಾರಂಭದಲ್ಲಿ ಶ್ರೀ ಯುತರಿಗೆಅಮೃತ ಶ್ರೀ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಯಿತು.
ಭಾಪೂರ್ಣ ನಮನ
ಶಿಕ್ಷಣ ರಾಜಕೀಯ ಅಧ್ಯಾತ್ಮ ಸಾಹಿತ್ಯ ಕಾನೂನು ಮುಂತಾದ ಕ್ಷೇತ್ರಗಳಲ್ಲಿ ನಿಸ್ಪೃಹ ಸೇವೆ ಸಲ್ಲಿಸಿ ಸಮಾಜಮುಖಿಯಾಗಿ ಬಾಳಿ, ಬದುಕಿನ ಸಾರ್ಥಕತೆಯನ್ನು ಮೆರೆದರು ಇತರರಿಗೆ ಆದರ್ಶ ಪ್ರಾಯರಾದರು.ಶತಾಯುಷಿಗಳಾಗುವ ಹೊಸ್ತಿಲಲ್ಲಿದ್ದ ಅವರು ಇಂದು ಕಾಲನ ಕರೆಗೆ ಓಗೊಟ್ಟು, ಇಹ ಲೋಕದ ಯಾತ್ರೆಯನ್ನು ಮುಗಿಸಿದರು. ಅವರ ಅಗಲಿಕೆಯು ನಮ್ಮೆಲ್ಲರಿಗೂ ನೋವಿನ ಸಂಗತಿಯಾಗಿದೆ,ಅವರು ದೈಹಿಕವಾಗಿ ದೂರವಾಗಿದ್ದರೂ, ಅವರು ಸಮಾಜಕ್ಕೆ ಸಲ್ಲಿಸಿದ ಸೇವೆಯಿಂದ ಚಿರಸ್ಮರಣೀಯರಾಗಿದ್ದಾರೆ.
ಹಿರಿಯ ಚೇತನಕ್ಕೆ ಭಾವಪೂರ್ಣ ನಮನ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್