ಕೊಪ್ಪಳ, 11 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ಕೊಪ್ಪಳ, ತಾಲ್ಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಕೊಪ್ಪಳ, ಪ್ರಾಥಮಿಕ ಆರೋಗ್ಯ ಕೇಂದ್ರ ಕಿನ್ನಾಳ ಹಾಗೂ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಟಣಕನಕಲ್-ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ. ಅವರು ವಿಶ್ವದಲ್ಲಿ ಜನಸಂಖ್ಯೆ ಅತೀ ವೇಗವಾಗಿ ಬೆಳೆಯುತ್ತದೆ. ಜನಸಂಖ್ಯೆ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಜನಸಂಖ್ಯೆ ಸ್ಪೋಟದಿಂದಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿಯೊಬ್ಬ ನಾಗರಿಕರು ಮತ್ತು ಯುವಜನತೆ ಜಾಗೃತರಾಗಬೇಕು. ಜೊತೆಗೆ ಕುಟುಂಬ ಕಲ್ಯಾಣ ಯೋಜನೆಯ ಪ್ರಾಮುಖ್ಯತೆ, ಲಿಂಗಸಮಾನತೆ, ಬಡತನ, ತಾಯಿಯ ಆರೋಗ್ಯ ಮತ್ತು ಮಾನವನ ಹಕ್ಕುಗಳಂತಹ ವಿವಿಧ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ವ್ಯಕ್ತಿ ಮತ್ತು ಕುಟುಂಬಗಳಿಗೆ ತಮ್ಮ ಸಂತಾನೋತ್ಪತ್ತಿ ಆಯ್ಕೆಗಳ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಭಾರತ ಹಳ್ಳಿಗಳ ದೇಶ, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ, ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳ ಬಗ್ಗೆ ವೈದ್ಯರು ಮತ್ತು ಸಿಬ್ಬಂದಿಗಳು ಅರಿವು ಮೂಡಿಸಿದರೆ ಸಾಲದು, ಪ್ರತಿಯೊಬ್ಬ ನಾಗರಿಕರು ತಿಳಿದುಕೊಂಡು ಇತರರಿಗೂ ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳ ಬಗ್ಗೆ ತಿಳಿಸಿ, ಜೀವನದಲ್ಲಿ ಅದನ್ನು ಅನುಸರಿಸಲು ಪ್ರೋತ್ಸಾಹಿಸುವಂತೆ ಜಾಗೃತಿ ಮೂಡಿಸಬೇಕು. ಜನಸಂಖ್ಯೆ ನಿಯಂತ್ರಿಸುವಲ್ಲಿ ಸರ್ಕಾರ ಜಾರಿಗೆ ತಂದ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು. ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದು, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯವಿವಾಹದಿಂದ ಬಾಲಕಿಯರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಗಳ ಬಗ್ಗೆ ಅರಿತುಕೊಂಡು, ಜಿಲ್ಲೆಯಲ್ಲಿ ಬಾಲ್ಯವಿವಾಹವಾಗದಂತೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ್ ಎಂ.ಹೆಚ್ ಅವರು ಮಾತನಾಡಿ, ವಿಶ್ವದ ಜನಸಂಖ್ಯೆಯು 1987 ರಲ್ಲಿ 500 ಕೋಟಿ ದಾಟಿದ ಪ್ರಯುಕ್ತ, ಪ್ರತಿ ವರ್ಷ ಜುಲೈ-11 ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮುದಾಯದ ಜನಪ್ರತಿನಿಧಿಗಳೊಂದಿಗೆ ಜಾಗೃತಿ ಮೂಡಿಸಲಾಗುತ್ತದೆ. ಜನಸಂಖ್ಯೆ ಹೆಚ್ಚಳದಿಂದ ದೇಶದ ಅಭಿವೃದ್ಧಿಯಲ್ಲಿ ಕುಂಟಿತಗೊಳ್ಳುತ್ತದೆ ಹಾಗೂ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ವರ್ಷದ ಘೋಷವಾಕ್ಯ: ಮೊದಲ ಗರ್ಭಧಾರಣೆಗೆ ಹಾಗೂ ನಂತರದ ಯೋಜಿತ ಗರ್ಭಧಾರಣೆಗೆ, ಆರೋಗ್ಯಕರ ದೇಹ, ಮನಸ್ಸು ಮತ್ತು ವಯಸ್ಸು ಅತ್ಯಾವಶ್ಯಕ ಎಂಬುದಾಗಿದೆ. ಒಂದು ಕುಟುಂಬಕ್ಕೆ ಹೆಣ್ಣಿರಲಿ-ಗಂಡಿರಲಿ ಮಕ್ಕಳು ಎರಡೇ ಇರಲಿ. ಸರ್ಕಾರ ನಿಗದಿ ಪಡಿಸಿದ ವಯಸ್ಸಿಗೆ ಮದುವೆ ಮಾಡಬೇಕು. ಬಾಲ್ಯ ವಿವಾಹ ಮಾಡಬಾರದು. ಬಾಲ್ಯ ವಿವಾಹ ಕಾನೂನು ಬಾಹೀರ. ಬಾಲ್ಯ ವಿವಾಹ ಮಾಡುವುದರಿಂದ ಸತಿ-ಪತಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 03 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ವಿಧಾನಗಳಾದ ಅಂತರ ಚುಚ್ಚುಮದ್ದು, ಛಾಯಾ ನುಂಗುವ ಮಾತ್ರೆ, ಮಾಲಾ-ಎನ್ ಮಾತ್ರೆ ಹಾಗೂ ಪಿ.ಪಿ.ಐ.ಯು.ಸಿ.ಡಿ (ವಂಕಿಧಾರಣೆ), ಪುರುಷರು ಬಳಸುವ ನಿರೋಧ್ ಇವುಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಅರ್ಹ ದಂಪತಿಗಳು ಅವುಗಳನ್ನು ಅಳವಡಿಸಿಕೊಂಡು ತಮ್ಮ ಕುಟುಂಬವನ್ನು ಸುಖೀ ಕುಟುಂಬವನ್ನಾಗಿ ಮಾಡಿಕೊಳ್ಳಬೇಕು ಮತ್ತು ಶಾಶ್ವತ ವಿಧಾನಗಳಾದ ಮಹಿಳೆಯರಿಗೆ ಉದರದರ್ಶಕ ಶಸ್ತçಚಿಕಿತ್ಸೆ ಹಾಗೂ ಪುರುಷರಿಗೆ ವ್ಯಾಸಕ್ಟಮಿ ಶಸ್ತçಚಿಕಿತ್ಸೆ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿಶ್ವದಲ್ಲಿ ಜನಸಂಖ್ಯೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಚೀನಾ ದೇಶ ಎರಡನೇ ಸ್ಥಾನದಲ್ಲಿದೆ. ಮೂಢನಂಬಿಕೆ, ಅಜ್ಞಾನ, ಅನಕ್ಷರತೆ, ಬಡತನ ಮುಂತಾದವು ಜನಸಂಖ್ಯೆ ಹೆಚ್ಚಳಕ್ಕೆ ಕಾರಣಗಳಾಗಿವೆ. ಜನಸಂಖ್ಯೆ ಸ್ಪೋಟದಿಂದ ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಸಮಾಜದ ಅಸಮಾನತೆ, ನಿರುದ್ಯೋಗ ಸಮಸ್ಯೆ ಉಂಟಾಗುತ್ತವೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕಾಗಿ ಬಾಲ್ಯವಿವಾಹ ಮಾಡಬಾರದು. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಅಂತರ ಕಾಪಾಡುವ ಸೌಲಭ್ಯಗಳ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ, ಪೋಕ್ಸೋ ಕಾಯ್ದೆ-2012ರ ಕುರಿತು ಹಾಗೂ ಹದಿ-ಹರೆಯದವರ ಆರೋಗ್ಯ ರಕ್ಷಣೆ, ಪೌಷ್ಠಿಕ ಆಹಾರ ಸೇವನೆ, ಮಕ್ಕಳ ಆರೋಗ್ಯ ಸಹಾಯವಾಣಿ 1098 ಮತ್ತು ಮಾನಸಿಕ ಟೆಲಿ ಮನಸ್ 14416 ಶುಲ್ಕರಹಿತ ದೂರವಾಣಿ ಕುರಿತು ಹಾಗೂ ಇತರೆ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ನಂದಕುಮಾರ, ಜಿಲ್ಲಾ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ. ಶಶಿಧರ ಎ., ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ.ಪ್ರಕಾಶ್ ಹೆಚ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ಗೋನಾಳು ಕುಮಾರಸ್ವಾಮಿ, ಆಡಳಿತ ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ, ಉಪಪ್ರಾಂಶುಪಾಲರಾದ ಗುರುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ ಕೆ., ಹಿ.ಪ್ರಾ.ಆ.ಸುರಕ್ಷಾಧಿಕಾರಿಗಳಾದ ವಂದನಾ, ಸಹ-ಉಪನ್ಯಾಸಕರಾದ ಪ್ರವೀಣ, ದೇವಪ್ಪ ಕುರಿ, ವೀರಣ್ಣ ಅಂಗಡಿ, ಶರಣಪ್ಪ, ಮಮತಾ ಕೆ.ಎಸ್, ಹಿ.ಆ.ನಿರೀಕ್ಷಣಾಧಿಕಾರಿಗಳು, ಪ್ರಾ.ಆ.ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್