ಉತ್ತಮ ಗುಣಮಟ್ಟದ ಆಹಾರ ವಿತರಣೆಗೆ ಕ್ರಮ : ಪ್ರಹ್ಲಾದ ಜೋಶಿ
ಹುಬ್ಬಳ್ಳಿ, 11 ಜುಲೈ (ಹಿ.ಸ.) : ಆ್ಯಂಕರ್ : ಅರ್ಹ ಪಡಿತರರಿಗೆ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುವುದು. ನಕಲಿ ಪಡಿತರದಾರರನ್ನು ಗುರುತಿಸಿ, ಪಡಿತರ ಕಾರ್ಡುಗಳನ್ನು ರದ್ದುಪಡಿಸಲಾಗುತ್ತದೆ. ಜನರಿಗೆ ಉತ್ತಮ ಗುಣಮಟ್ಟದ ಆಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಗ್ರಾಹಕರ ವ್ಯವಹ
Visit


ಹುಬ್ಬಳ್ಳಿ, 11 ಜುಲೈ (ಹಿ.ಸ.) :

ಆ್ಯಂಕರ್ : ಅರ್ಹ ಪಡಿತರರಿಗೆ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುವುದು. ನಕಲಿ ಪಡಿತರದಾರರನ್ನು ಗುರುತಿಸಿ, ಪಡಿತರ ಕಾರ್ಡುಗಳನ್ನು ರದ್ದುಪಡಿಸಲಾಗುತ್ತದೆ. ಜನರಿಗೆ ಉತ್ತಮ ಗುಣಮಟ್ಟದ ಆಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ್ ಜೋಶಿ‌ ಹೇಳಿದರು.

ಇಂದು ಉಣಕಲ್ ನಲ್ಲಿರುವ ಭಾರತೀಯ ಆಹಾರ ನಿಗಮದ ಆಹಾರ ಸಂಗ್ರಹಣಾ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ಆಹಾರ ನಿಗಮವು ಎನ್‌‌ಎಫ್‌‌ಎಸ್‌‌ಎ ಕಾಯ್ದೆಯ ಪ್ರಕಾರ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಆಹಾರದ ತ್ಯಾಜ್ಯವನ್ನು ಕಡಿಮೆ ಮಾಡಲು ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡಲಾಗಿದೆ. ಆಹಾರ ತ್ಯಾಜ್ಯದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಹಾರ ಧಾನ್ಯ ಸಂಗ್ರಹಣಾ ಕೊಠಡಿಯಲ್ಲಿ ಯಾವ ರೀತಿಯಲ್ಲಿ ಆಹಾರವನ್ನು ಸಂಗ್ರಹಿಸಬೇಕು. ಯಾವ ಔಷಧಿಗಳ ಸಿಂಪಡಣೆ ಮಾಡಬೇಕು ಎನ್ನುವುದನ್ನು ಸೂಚನೆ ನೀಡಲಾಗಿರುತ್ತದೆ. ಆಹಾರದ ಸಾಗಾಣಿಕೆ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಆ ಮೂಲಕ ವಾಹನಗಳು ಯಾವ ಊರಿಗೆ ಹೋಗುತ್ತಿವೆ ಎಂಬುದನ್ನು ಸಹ ಗಮನಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಉಣಕಲ್ಲಿನ ಭಾರತೀಯ ಆಹಾರ ನಿಗಮದಿಂದ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲ್ಲೂಕುಗಳ ಎನ್‌‌ಎಫ್‌‌ಎಸ್‌‌ಎ, ಪಿಎಂ ಪೋಷನ್, ಡಬ್ಲೂಬಿಎನ್‌‌ಪಿ, ಕಲ್ಯಾಣ ಸಂಸ್ಥೆಗಳು ಮತ್ತು ಹಾಸ್ಟೆಲ್ ಯೋಜನೆಯ ಅವಶ್ಯಕತೆಗಳನ್ನು ಪೂರೈಸುತ್ತಿದೆ. 2024-25 ನೇ ಸಾಲಿನಲ್ಲಿ ಗೋದಾಮಿನಿಂದ 13,553 ಮೆಟ್ರಿಕ್ ಟನ್ ಸಂಗ್ರಹವನ್ನು ಬಿಡುಗಡೆ ಮಾಡಲಾಗಿದೆ. ಹುಬ್ಬಳ್ಳಿಯ ವಿಭಾಗೀಯ ಕಚೇರಿಯು ಬೆಳಗಾವಿ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಗದಗ, ಬಾಗಲಕೋಟೆ ಮತ್ತು ಹಾವೇರಿ ಕಂದಾಯ ಜಿಲ್ಲೆಗಳನ್ನು ಒಳಗೊಂಡಿದೆ. ಹುಬ್ಬಳ್ಳಿಯ ವಿಭಾಗೀಯ ಕಚೇರಿಯು 2024-25ನೇ ಸಾಲಿನಲ್ಲಿ ಎನ್‌ಎಫ್‌ಎಸ್‌ಎಫ್‌ಎ, ಪಿಎಂ ಪೋಶನ್, ಡಬ್ಲ್ಯೂಬಿಎನ್‌ಪಿ, ಕಲ್ಯಾಣ ಸಂಸ್ಥೆಗಳು ಮತ್ತು ಹಾಸ್ಟೆಲ್ ಯೋಜನೆ ಮತ್ತು ರಕ್ಷಣಾ ಯೋಜನೆಗಳ ಅಡಿಯಲ್ಲಿ 6,08,270 ಮೆಟ್ರಿಕ್ ಟನ್ ಅಕ್ಕಿ ಮತ್ತು 29,423 ಮೆಟ್ರಿಕ್ ಟನ್ ಗೋಧಿ ದಾಸ್ತಾನುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.

ಪ್ರಸಕ್ತ ವರ್ಷ ರಾಜ್ಯದಲ್ಲಿ ನಿಗಮದಿಂದ ಎನ್‌‌ಎಫ್‌‌ಎಸ್‌‌ಎ ಯೋಜನೆ ಅಡಿಯಲ್ಲಿ ಕಾರ್ಡುದಾರರಿಗೆ ಉಚಿತವಾಗಿ ತಲಾ 5 ಕೆಜಿಯಂತೆ ಸುಮಾರು 24,85,799 ಟನ್ ವಿತರಣೆಯಾಗಿದೆ. ಕೇಂದ್ರ ಸರಕಾರವು ಮಾರುಕಟ್ಟೆಯಲ್ಲಿ ಅಕ್ಕಿ ಮತ್ತು ಗೋಧಿ ದರ ನಿಯಂತ್ರಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಕ್ತ ಮಾರುಕಟ್ಟೆ ಅಡಿಯಲ್ಲಿ 4,60,959 ಟನ್ ಅಕ್ಕಿ ಮತ್ತು 1,05,065 ಟನ್ ಗೋಧಿಯನ್ನು ಮಾರಾಟ ಮಾಡಿದೆ. ಅಲ್ಲದೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಪಿಎಮ್ ಪೋಷಣ ಯೋಜನೆಯಲ್ಲಿ ಸುಮಾರು 1,06,895 ಟನ್ ಆಹಾರ ಧಾನ್ಯ ವಿತರಣೆಯಾಗಿದೆ. ರಾಜ್ಯ ಸರ್ಕಾರವು ಫೆಬ್ರವರಿ ಮಾಹೆಯಿಂದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಸುಮಾರು 2,42,000 ಟನ್ ಅಕ್ಕಿಯನ್ನು ಭಾರತೀಯ ಆಹಾರ ನಿಗಮದಿಂದ ಖರೀದಿಸುತ್ತಿದೆ. 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಬಿಸಿಯೂಟ ವ್ಯವಸ್ಥೆಗಾಗಿ 7,811 ಟನ್ ಅಕ್ಕಿಯನ್ನು ರಾಜ್ಯ ಸರ್ಕಾರಕ್ಕೆ ಮುಕ್ತ ಮಾರಾಟ ಯೋಜನೆಯಲ್ಲಿ ನೀಡಲಾಗಿದೆ. ರಾಜ್ಯದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ನೀತಿ ಆಯೋಗದಿಂದ ಮಹತ್ವಾಕಾಂಕ‌್ಷಿ ಜಿಲ್ಲೆಗಳಾಗಿ ಗುರುತಿಸಲ್ಪಟ್ಟಿದ್ದು, ಜಿಲ್ಲೆಯ ಕಿಶೋರಾವಸ್ಥೆ ಹೆಣ್ಣು ಮಕ್ಕಳಿಗಾಗಿರುವ ಯೋಜನೆಯಲ್ಲಿ 32 ಟನ್ ಅಕ್ಕಿ ಮತ್ತು 472 ಟನ್ ಗೋದಿ ವಿತರಿಸಲಾಗಿದೆ. ಮಕ್ಕಳ ಸಮಗ್ರ ಬೆಳವಣಿಗೆ ಯೋಜನೆ ಅಡಿಯಲ್ಲಿ ಸುಮಾರು 1,14,710 ಟನ್ ಆಹಾರ ಧಾನ್ಯಗಳನ್ನು ಪೂರೈಸಲಾಗಿದೆ. ಅಕ್ಕಿ ಮತ್ತು ಗೋಧಿಯನ್ನು ಹೆಚ್ಚುವರಿಯಾಗಿ ಬೆಳೆಯುವ ರಾಜ್ಯಗಳಿಂದ ರೈಲ್ವೆ ರೇಕುಗಳ ಮೂಲಕ ತರಿಸಿಕೊಂಡು ರಾಜ್ಯದಲ್ಲಿ ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿಯೂ ಕೂಡ ಆಹಾರ ಧಾನ್ಯಗಳ ಖರೀದಿ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಬೆಂಬಲಿತ ಕನಿಷ್ಠ ಬೆಂಬಲ ಯೋಜನೆಯ ಮೂಲಕ ಭತ್ತ, ರಾಗಿ ಮತ್ತು ಜೋಳವನ್ನು ರಾಜ್ಯ ಸರ್ಕಾರದ ಮೂಲಕ ಖರೀದಿಸಲಾಗಿದೆ. ರಾಜ್ಯದಲ್ಲಿ ಸುಮಾರು 33.4 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆ ಆಗುತ್ತಿದ್ದು, ಪ್ರಸಕ್ತ ವರ್ಷ 510 ಮೆಟ್ರಿಕ್ ಟನ್ ಖರೀದಿಯಾಗಿದೆ. ರಾಗಿ ಮತ್ತು ಜೋಳದ ಉತ್ಪಾದನೆ 9.44 ಲಕ್ಷ ಮೆಟ್ರಿಕ್ ಟನ್ ಮತ್ತು 7.72 ಲಕ್ಷ ಮೆಟ್ರಿಕ್ ಟನ್ ಇದ್ದು, ಖರೀದಿ ಕ್ರಮವಾಗಿ 3.45 ಲಕ್ಷ ಮೆಟ್ರಿಕ್ ಟನ್ ಹಾಗೂ 1.93 ಲಕ್ಷ ಮೆಟ್ರಿಕ್ ಟನ್ ಆಗಿರುತ್ತದೆ. ಖರೀದಿ ಪ್ರಕ್ರಿಯೆಯು ಮುಂಚಿತವಾಗಿ ಪ್ರಾರಂಭವಾದಲ್ಲಿ ಖರೀದಿ ಪ್ರಮಾಣವನ್ನು ಹೆಚ್ಚಿಸಬಹುದು ಎಂದರು.

ಈ ಸಂದರ್ಭದಲ್ಲಿ ಭಾರತೀಯ ಆಹಾರ ನಿಗಮದ ದಕ‌್ಷಿಣ ಭಾರತದ ಕಾರ್ಯನಿರ್ವಾಹಕ ಇಂಜಿನೀಯರ್ ಜೆಸಿಂತಾ ಎಲ್‌., ಕರ್ನಾಟಕ ರಾಜ್ಯದ ಪ್ರಧಾನ ವ್ಯವಸ್ಥಾಪಕರಾದ ಬಿ.ಓ.ಮಹೇಶ್ವರಪ್ಪ, ಉಪ ಪ್ರಧಾನ ವ್ಯವಸ್ಥಾಪಕರಾದ ದೇವೀಂದರ ಸಿಂಗ್, ಶೇಖರ್ ಅರವಿಂದ, ರಮೇಶ ನಾಯ್ಕ, ವಿಭಾಗೀಯ ವ್ಯವಸ್ಥಾಪಕರಾದ ಮಂಜುನಾಥ ಹೊಂಗಲ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪಿ.ವ್ಯಾಸ ಭಗವಾನ್, ಮೊಹಿನುದ್ದೀನ್‌ ಹುಂಡೇಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande