ಕೊಪ್ಪಳ, 10 ಜುಲೈ (ಹಿ.ಸ.) :
ಆ್ಯಂಕರ್ : ಪ್ರತಿಯೊಬ್ಬ ಹೆರಿಗೆಯಾದ ಹೆಣ್ಣುಮಕ್ಕಳು ಯಾವುದಾದರೂ ಒಂದು ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳನ್ನ ಬಳಸಿಕೊಂಡು ಹೆರಿಗೆಗಳ ನಡುವೆ ಅಂತರವನ್ನು ಕಾಪಾಡಿಕೊಳ್ಳಬೇಕು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ್ ಎಂ.ಹೆಚ್ ಅವರು ಹೇಳಿದ್ದಾರೆ.
ಅವರು ಬುಧವಾರ ತಾಲ್ಲೂಕಿನ ಕೂಕನಪಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಕೂಕನಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ “ದಂಪತಿ ಸಂಪರ್ಕ ಪಾಕ್ಷಿಕ” ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ಜುಲೈ 11 ರಂದು “ವಿಶ್ವ ಜನಸಂಖ್ಯಾ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಅದರ ಅಂಗವಾಗಿ ಜಿಲ್ಲೆಯಲ್ಲಿ 2025ರ ಜೂನ್ 27 ರಿಂದ ಜುಲೈ 10ರ ವರೆಗೆ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ “ದಂಪತಿ ಸಂಪರ್ಕ ಪಾಕ್ಷಿಕ” ಜಾಗೃತಿ ಕಾರ್ಯಕ್ರಮ ಆಚರಿಸಿ, ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳ ಬಗ್ಗೆ ಅರ್ಹ ದಂಪತಿಗಳಿಗೆ ಅರಿವು ಮೂಡಿಸಿದೆ.
ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ವರ್ಷ ಅಂತರ ಕಾಪಾಡಬೇಕು. ಈ ಅವಧಿಯಲ್ಲಿ ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ವಿಧಾನಗಳಾದ ವಂಕಿ ಅಳವಡಿಸಿಕೊಳ್ಳುವುದು, 3 ತಿಂಗಳಿಗೊಂದು ಅಂತರ ಚುಚ್ಚುಮದ್ದು ಹಾಕಿಸಿಕೊಳ್ಳುವುದು, ನುಂಗುವ ಮಾತ್ರೆ ತೆಗೆದುಕೊಳ್ಳುವುದು, ಪುರುಷರು ನಿರೋಧ್ ಉಪಯೋಗಿಸಿ, ಹೆರಿಗೆಗಳ ನಡುವೆ ಅಂತರ ಕಾಪಾಡಬೇಕು. ಅಂತರ ಕಾಪಾಡುವುದರಿಂದ ತಾಯಿ ಮತ್ತು ಶಿಶುಗಳ ಆರೋಗ್ಯ ಸುರಕ್ಷಿತವಾಗಿಡಬಹುದು ಎಂದರು.
ಮೇಲಿಂದ ಮೇಲೆ ಹೆರಿಗೆಯಾಗುವುದರಿಂದ ತಾಯಿಗೆ ಗರ್ಭಕೋಶದ ತೊಂದರೆ ಹಾಗೂ ಇತರೆ ಸಮಸ್ಯೆಗಳು ಉಂಟಾಗುತ್ತದೆ. ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳನ್ನ ಬಳಸಿ, ಅಂತರ ಕಾಪಾಡಿಕೊಳ್ಳಬೇಕು. “ಹೆಣ್ಣಿರಲಿ-ಗಂಡಿರಲಿ ಮಕ್ಕಳೆರಡೇ ಇರಲಿ” ಎರಡು ಮಕ್ಕಳ ನಂತರ ಶಾಶ್ವತ ವಿಧಾನಗಳಾದ ಮಹಿಳೆಯರಿಗೆ ಉದರದರ್ಶಕ ಶಸ್ತ್ರಚಿಕಿತ್ಸೆ ಹಾಗೂ ಪುರುಷರಿಗೆ ಎನ್.ಎಸ್.ವಿ ಶಸ್ತ್ರಚಿಕಿತ್ಸೆಯನ್ನು ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಪ್ರತಿ ಕುಟುಂಬಕ್ಕೆ ಹೆಣ್ಣಾಗಲಿ ಗಂಡಾಗಲಿ ಒಂದು ಅಥವಾ ಎರಡು ಮಕ್ಕಳು ಸಾಕು, ಚಿಕ್ಕ ಕುಟುಂಬ ಚೊಕ್ಕ ಕುಟುಂಬ, ಚಿಕ್ಕ ಕುಟುಂಬ ಸುಖೀ ಕುಟುಂಬ. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಎಂಬುದನ್ನು ಅರಿತುಕೊಂಡು ಎಲ್ಲರೂ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೂಕನಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕರಿಯಮ್ಮ ಅವರು ಮಾತನಾಡಿ, ಪ್ರತಿ ತಿಂಗಳು 9ನೇ ತಾರಿಖಿನಂದು ಪ್ರಧಾನಮಂತ್ರಿ ಮಾತೃತ್ವ ಸುರಕ್ಷಿತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ತೊಡಕಿನ ಗರ್ಭಿಣಿಯರು, ಸಾಮಾನ್ಯ ಗರ್ಭಿಣಿಯರನ್ನು ತಪಾಸಣೆ ಮಾಡಿ, ಸಮಸ್ಯೆ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ತಾಯಿಮರಣ ಮತ್ತು ಶಿಶುಮರಣ ತಡೆಗಟ್ಟಲು ಸಾಧ್ಯವಾಗುತ್ತದೆ. ಕುಟುಂಬ ಕಲ್ಯಾಣ ಯೋಜನೆಯ ವಿಧಾನಗಳನ್ನು ಬಳಸುವುದರಿಂದ ಕುಟುಂಬದ ಆರ್ಥಿಕತೆ ಸುಧಾರಿಸುತ್ತದೆ. ಇದರಿಂದ ಉತ್ತಮ ಜೀವನ ಸಾಗಿಸಬಹುದು. ಕುಟುಂಬ ಕಲ್ಯಾಣ ಯೋಜನೆಗಳ ಬಳಕೆಯ ಬಗ್ಗೆ ಇರುವ ಮೂಡನಂಬಿಕೆ ಬಿಟ್ಟು ಅಳವಡಿಸಿಕೊಂಡು ಸುರಕ್ಷಿತವಾಗಿರಲು ತಿಳಿಸಿದರು.
ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಅವರು ಗರ್ಭಪೂರ್ವ ಮತ್ತು ಪ್ರಸವಪೂರ್ವ ಬ್ರೂಣಲಿಂಗ ಪತ್ತೆ ಮತ್ತು ಹತ್ಯೆ ಶಿಕ್ಷಾರ್ಯ ಅಪರಾದ ಕುರಿತು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಾವಿತ್ರಿ, ಶ್ರೀಮತಿ ಫಾಮಿದ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಬ್ಬಿರ್, ರಮೇಶ ಸೇರಿದಂತೆ ಇತರೆ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ತಾಯಂದಿರು ಹಾಗೂ ದಂಪತಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್