ಧಾರವಾಡ, 10 ಜುಲೈ (ಹಿ.ಸ.) :
ಆ್ಯಂಕರ್ : ಎಲ್ಲ ಧರ್ಮ, ಜಾತಿ, ಮತ, ಪಂಥಗಳ ಭೇದವಿಲ್ಲದೇ ಸಮಾನತೆ ಹಾಗೂ ಸಾಮರಸ್ಯದಿಂದ ಬದುಕಬೇಕು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ಜ್ಯೋತಿ ಪಾಟೀಲ ಅವರು ಕರೆ ನೀಡಿದರು.
ಜಿಲ್ಲಾಡಳಿತ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಇಂದು ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶರಣ ಪರಂಪರೆಯ ಪ್ರಮುಖರಾದ ಹಡಪದ ಅಪ್ಪಣ್ಣನವರು ಕಾಯಕಯೋಗಿ, ಅನುಭವದ ವಚನಕಾರರಾಗಿದ್ದರು. ಸಮಾನತೆಯ ಬದುಕಿಗೆ ಅವರು ಮಾದರಿಯಾಗಿದ್ದಾರೆ ಎಂದು ಪಾಟೀಲ ಹೇಳಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಶರಣರು ಎಲ್ಲಾ ಧರ್ಮ-ಜಾತಿಯವರಿಗೂ ಧ್ಯೇಯವಾಕ್ಯವಾದ ಜೀವನದ ಸಂದೇಶ ನೀಡಿದವರು ಎಂದರು.
ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶರಣರು ಮನುಷ್ಯ ಜಾತಿಯನ್ನಷ್ಟೆ ಪ್ರಮುಖವಾಗಿ ಕಂಡು, ಸಹೋದರತ್ವದ ಬದುಕನ್ನು ನಡೆಸಿದ ಮಹಾನ್ ವಿದ್ವಾಂಸರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಸನ್ಮಾನವಿತ್ತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ರಾಜೇಶ್ವರಿ ಮಂಜುನಾಥ ಹಡಪದ ಸೇರಿದಂತೆ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa