ಕೋಲಾರ, ೧೦ ಜುಲೈ (ಹಿ.ಸ) :
ಆ್ಯಂಕರ್ : ಜಿಲ್ಲೆಯಲ್ಲಿ ಗಡಿ ಗ್ರಾಮಗಳನ್ನು ಗುರುತಿಸಿ ಮ್ಯಾಪಿಂಗ್ ಮಾಡಲಾಗುತ್ತಿದೆ. ಕಾಡಂಚಿನ ಗ್ರಾಮಗಳು ಹಾಗೂ ಅಂತರರಾಜ್ಯ ಗಡಿ ಗ್ರಾಮಗಳನ್ನು ಗುರುತಿಸಿ, ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಲಾಗುವುದು. ಕೋಲಾರ ಜಿಲ್ಲೆಯ ಗಡಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಹೋಬಳಿಯ ಕದರಿನತ್ತ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಜಿಲ್ಲಾಧಿಕಾರಿ, ಕದರಿನತ್ತ ಗ್ರಾಮ ಜಿಲ್ಲೆಯ ಕೊನೆಯ ಗ್ರಾಮವಾಗಿದ್ದು, ಈ ಗ್ರಾಮದ ಸುತ್ತಲೂ ಅರಣ್ಯ ಪ್ರದೇಶ ಸುತ್ತಿವರೆದಿರುವುದರಿಂದ ಗ್ರಾಮಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.
ತೊಪ್ಪನಹಳ್ಳಿಯಿಂದ ೩ ರಿಂದ ೪ ಕಿಲೋಮೀಟರ್ ರಸ್ತೆ ಅಭಿವೃದ್ಧಿ ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ. ರಸ್ತೆ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ ಹಣ ಮೀಸಲಿಡಲಾಗಿದೆ. ಅನುದಾನ ಬಿಡುಗಡೆಯಾದ ನಂತರ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಈ ಭಾಗದಲ್ಲಿ ಆನೆಗಳ ಹಾವಳಿ ಸಹ ಹೆಚ್ಚಾಗಿದ್ದು, ಆನೆಗಳಿಂದ ರಕ್ಷಿಸಲು ಹೈಮಾಸ್ಕ್ ಲೈಟ್ ಹಾಗೂ ಸೋಲಾರ ಲೈಟ್ ಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಗ್ರಾಮದ ಶಾಲೆ ತುಂಬಾ ಹಳೆಯದಾಗಿದ್ದು, ಶಿಥಿಲೀಕರಣ ಗೊಂಡಿದೆ. ಸಿಎಸ್‍ಆರ್ ಅನುದಾನದಿಂದ ಹೊಸ ಶಾಲೆಯನ್ನು ನಿರ್ಮಿಸಲು ಕ್ರಮವಹಿಸಲಾಗುವುದು. ಈ ಭಾಗದಲ್ಲಿ ನೀರು ಹೆಚ್ಚು ಪೋಲಾಗುತ್ತಿದ್ದು, ನೀರನ್ನು ಸಂಗ್ರಹಿಸಲು ಚೆಕ್ ಡ್ಯಾಂಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಈ ಗ್ರಾಮಕ್ಕೆ ಬಸ್ ಬೆಳಿಗ್ಗೆ ಮತ್ತು ಸಂಜೆ ಸಂಚರಿಸುತ್ತಿದ್ದು, ಮಧ್ಯಾಹ್ನ ವೇಳೆ ಸಂಚರಿಸಲು ಕೆಎಸ್.ಆರ್.ಟಿ.ಸಿ.ಯೊಂದಿಗೆ ಚರ್ಚಿಸಿ ಬಸ್ ಸೇವೆ ಕಲ್ಪಿಸÀಲಾಗುವುದು. ಈ ಭಾಗದ ರೈತರು, ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಜಿಲ್ಲಾಡಳಿತ ಮಾಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚಿತ್ರ : ಕರ್ನಾಟಕ ತಮಿಳುನಾಡು ಗಡಿ ಗ್ರಾಮವಾದ ಬಂಗಾರಪೇಟೆ ತಾಲ್ಲೂಕಿನ ಕದಿರಿನತ್ತ ಗ್ರಾಮಕ್ಕೆ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್