ಬಳ್ಳಾರಿ, 10 ಜುಲೈ (ಹಿ.ಸ.) :
ಆ್ಯಂಕರ್ : ಹಡಪದ ಅಪ್ಪಣ್ಣನವರು, ತಮ್ಮ ವಚನಗಳ ಮೂಲಕ ಸಮಾಜದ ತಾರತಮ್ಯ ಹೋಗಲಾಡಿಸಿದ್ದವರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದಲ್ಲಿ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮವನ್ನು ಹಡಪದ ಅಪ್ಪಣ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಡಪದ ಅಪ್ಪಣ್ಣನವರು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದವರು. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ. “ಅಪ್ಪಣ್ಣ ಪ್ರಿಯ ಚನ್ನಬಸವಣ್ಣ” ಎಂಬ ಅಂಕಿತನಾಮದಿಂದ ಸುಮಾರು 250 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಬಳ್ಳಾರಿಯ ನಿವೃತ್ತಿ ಮುಖ್ಯಗುರುಗಳಾದ ಸಿ.ಕೊಟ್ರಪ್ಪ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಅಪ್ಪಣ್ಣನವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ “ಅನುಭವ ಮಂಟಪ”ದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದರು.
ಇದೇ ವೇಳೆ ಶ್ರೀ ಶಿವಲಿಂಗ ಶಿವಾಚಾರ್ಯ ಜಂಗಮ ಹೊಸಳ್ಳಿ ಅವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಿರುಗುಪ್ಪದ ವೀರೇಶ್ ದಳವಾಯಿ ಅವರ ತಂಡದಿಂದ ವಚನ ಸಂಗೀತ ಪ್ರಸ್ತುತ ಪಡಿಸಿದರು ಹಾಗೂ ಸಿಂಧುವಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಲಾಟ ಕಲೆಯ ಪ್ರದರ್ಶನ ನೀಡಿದ ಮಕ್ಕಳಿಗೆ ಗಣ್ಯರಿಂದ ಸನ್ಮಾನಿಸಿಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಬಳ್ಳಾರಿ ಜಿಲ್ಲಾ ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ಹೆಚ್.ರುದ್ರಪ್ಪ, ಕುರುಗೋಡು ತಾಲ್ಲೂಕು ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ಹೆಚ್.ಮಂಜುನಾಥ, ಬಳ್ಳಾರಿ ತಾಲ್ಲೂಕು ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ಸದಾಶಿವ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್