ರಾಯಚೂರು, 09 ಜೂನ್ (ಹಿ.ಸ.) :
ಆ್ಯಂಕರ್ : ಡೆಂಗೆ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಲಾರ್ವ ಬೆಳವಣಿಗೆಯನ್ನು ತಡೆಯಲು ಶಾಲೆಯ ಪರಿಸರದಲ್ಲಿ ನೀರು ನಿಲ್ಲದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ ಅವರು ಹೇಳಿದ್ದಾರೆ.
ಜೂನ್ 09ರ ಸೋಮವಾರ ನಗರದ ಜಾಹೀರಾಬಾದಿನ ಕನಿಕಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಾರ್ವ ಮುಕ್ತ ಶಾಲೆ ಅಭಿಯಾನ ಕುರಿತು ಅವರು ಮಾತನಾಡಿದರು.
ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುವ ಈಡೀಸ್ ಸೊಳ್ಳೆಯಿಂದ ಡೆಂಗೆ ರೋಗ ಉಲ್ಭಣವಾಗಲಿದೆ. ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಡೆಂಗೆ ಪರಿಣಾಮಕಾರಿಯಾಗಿ ತಡೆಗಟ್ಟಲು ಶಾಲಾ ಸುತ್ತಲು 2-3 ದಿನಗಳ ಕಾಲ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಸಂಗ್ರಹವಾಗುವ ನೀರನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ, ನಗರ ಪ್ರದೇಶಗಳಲ್ಲಿ ಡೆಂಗೆ ಕಾಯಿಲೆ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಶಾಲಾ ಆವರಣದಲ್ಲಿ ನೀರು ಶೇಖರಣೆಯಾಗುವ ತೊಟ್ಟಿಗಳು, ಡ್ರಮ್, ಬ್ಯಾರೆಲ್, ಒಡೆದ ಬಾಟಲಿ, ಅನುಪಯುಕ್ತ ಟೈರುಗಳು, ಎಳೆನೀರಿನ ಚಿಪ್ಪುಗಳು, ಒಡೆದ ಬಾಟಲಿಗಳಲ್ಲಿ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಡೆಂಗೆ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಮಕ್ಕಳು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸ್ವಯಂ ರಕ್ಷಣಾ ವಿಧಾನ ಅನುಸರಿಸಬೇಕು. ಮೈ ತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆ ಪರದೆ ಉಪಯೋಗಿಸಬೇಕು. ಕಿಡಕಿಗಳಿಗೆ ಜಾಲರಿ ಅಳವಡಿಸಬೇಕು. ಗುಡ್ ನೈಟ್, ಸೊಳ್ಳೆ ಹೊಡೆಯುವ ಬ್ಯಾಟ್ ಉಪಯೋಗಿಸಬೇಕು. ಮನೆಯಲ್ಲಿರುವ ನೀರಿನ ಪರಿಕರಗಳನ್ನು ವಾರಕ್ಕೊಮ್ಮೆ ತೊಳೆದು ಒಣಗಿಸಬೇಕು.
ಯಾವುದೇ ಜ್ವರ ಇರಲಿ ಹತ್ತಿರದ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ಡೆಂಗೆ ಜ್ವರ ಕುರಿತು ಒಬ್ಬರಿಗೊಬ್ಬರು ಮಾಹಿತಿ ನೀಡಿದಲ್ಲಿ ಡೆಂಗೆ ಜ್ವರ ನಿಯಂತ್ರಿಸಬಹುದು ಎಂದು ಅವರು ಸಲಹೆ ಮಾಡಿದರು.
ಜವಾಬ್ದಾರಿ ಹಂಚಿಕೆ: ಆರೋಗ್ಯ ಇಲಾಖೆ ಆದೇಶದಂತೆ ದಿನಾಲೂ ಶಾಲೆ ಚಾವಣಿ, ಕಂಪೌಂಡ್ ಸುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಶಾಲೆಯಲ್ಲಿ ವಿಜ್ಞಾನ ಹಾಗೂ ದೈಹಿಕ ಶಿಕ್ಷಕರಿಗೆ ನೋಡಲ್ ಅಧಿಕಾರಿಗಳಾಗಿ ಜವಬ್ದಾರಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಮಲ್ಲಪ್ಪ, ಶಿಕ್ಷಕಿ ಕೊಂಡ ಸರಸ್ವತಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪದ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಶೃತಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್