ಹಂಪಿ, 09 ಜೂನ್ (ಹಿ.ಸ.) :
ಆ್ಯಂಕರ್ : ಹಂಪಿ ವಿಶ್ವ ಪರಂಪರೆ ಪ್ರದೇಶದ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೇ ನಿರ್ಮಾಣ ಹಾಗೂ ಅಭಿವೃದ್ಧಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.
ಹಂಪಿಯು ಯುನೆಸ್ಕೋ ಮಾನ್ಯತೆ ಪಡೆದ ವಿಶ್ವ ಪಾರಂಪರಿಕ ತಾಣವಾಗಿದ್ದು, ಐತಿಹಾಸಿಕ ಮತ್ತು ಸಂಸ್ಕೃತಿ ಮಹತ್ವವನ್ನು ಸಂರಕ್ಷಿಸಲು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರವು ನಿಗದಿತ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ನಿಯಮಾವಳಿಗಳನ್ವಯ ಪ್ರಾಧಿಕಾರದ ಮಿತಿಯೊಳಗಿನ ಯಾವುದೇ ಕಟ್ಟಡ ನಿರ್ಮಾಣ, ಪುನರ್ ನಿರ್ಮಾಣ, ವಿಸ್ತರಣೆ ಅಥವಾ ಯಾವುದೇ ಅಭಿವೃದ್ದಿ ಚಟುವಟಿಕೆ ಪ್ರಾರಂಭಿಸುವ ಮುನ್ನ ಪ್ರಾಧಿಕಾರದ ಲಿಖಿತ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ.
ಅನುಮತಿಯಿಲ್ಲದೇ ನಡೆಯುವ ಯಾವುದೇ ನಿರ್ಮಾಣ ಕಾರ್ಯಗಳನ್ನು ಅನಧಿಕೃತ ಎಂದು ಪರಿಗಣಿಸಿ ಯಾವುದೇ ಮುನ್ಸೂಚನೆಯಿಲ್ಲದೆ ತೆರವುಗೊಳಿಸಲಾಗುವುದು ಮತ್ತು ಅನಧಿಕೃತ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ದ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಕಾಯ್ದೆ 2002 ಹಾಗೂ ಇತರೆ ಸಂಬಂಧಿಸಿದ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್