ಕಲಬುರಗಿ, 26 ಜೂನ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರಿಗೆ ಕಾಲಮಿತಿಯಲ್ಲಿಯೇ ಸರ್ಕಾರಿ ಸೇವೆ ಒದಗಿಸುವ ಸಕಾಲ ಯೋಜನೆಯಡಿ ಕಳೆದ ಮೇ-2025 ಮಾಹೆಯ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿಯೇ ಮೂರನೇ ಸ್ಥಾನ ಗಳಿಸಿದೆ.
ಮೇ ಮಾಹೆಯಲ್ಲಿ ಸಲ್ಲಿಕೆಯಾದ 1,02,785 ಅರ್ಜಿಗಳಲ್ಲಿ 1,01,011 ಅರ್ಜಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗಿದ್ದು, ಮಾಸಾಂತ್ಯಕ್ಕೆ ಕೇವಲ 295 ಅರ್ಜಿ ಮಾತ್ರ ಬಾಕಿ ಉಳಿದುಕೊಂಡಿವೆ. ಕಾಲಮಿತಿಯಲ್ಲಿ ವಿಲೇವಾರಿಗೆ ಶೇ.50, ತಿರಸ್ಕಾರಕ್ಕೆ ಶೇ.10, ಒಂದು ಲಕ್ಷ ಜನಸಂಖ್ಯೆಗೆ ಸಲ್ಲಿಕೆಯಾದ ಅರ್ಜಿಗಳಿಗೆ ಶೇ.20 ಹಾಗೂ ಬಾಕಿ ಅರ್ಜಿಗಳಿಗೆ ಶೇ.20 ಅಂಕಗಳನ್ನು ನೀಡಿ ಒಟ್ಟಾರೆ ರ‌್ಯಾಂಕಿಂಗ್ ತೆಗೆಯಲಾಗಿದ್ದು, ಕಲಬುರಗಿ ಮೂರನೇ ಸ್ಥಾನ ಪಡೆದಿದೆ.
ಬೆಂಗಳೂರು ನಗರ 5.43 ಲಕ್ಷ, ಬೆಳಗಾವಿ 1.88 ಲಕ್ಷ, ಮೈಸೂರು 1.54 ಲಕ್ಷ, ತುಮಕೂರು 1.47 ಲಕ್ಷ ಹೊರತುಪಡಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು 1.02 ಲಕ್ಷ ಅರ್ಜಿ ಸ್ವೀಕೃತಗೊಂಡಿದ್ದು, ಕಾಲಮಿತಿಯಲ್ಲಿಯೇ ಶೇ.98.05 ವಿಲೇವಾರಿ ಮಾಡಿ ಅಗ್ರ ಐದರಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದೆ.
ಇನ್ನು ಪ್ರಸಕ್ತ 2025ರಲ್ಲಿ ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸ್ವೀಕೃತವಾದ 6,40,951 ಅರ್ಜಿಗಳಲ್ಲಿ 6,38,840 ವಿಲೇವಾರಿ ಮಾಡಿ ಶೇ.99.67 ರಷ್ಟು ವಿಲೇವಾರಿ ಪ್ರಗತಿ ಸಾಧಿಸಿದೆ. ಪ್ರಸಕ್ತ ಜೂನ್ ಮಾಹೆಯಲ್ಲಿಯೂ ಅರ್ಜಿ ವಿಲೇವಾರಿ ಕಾರ್ಯ ನಡೆದಿದ್ದು, ಇದೂವರೆಗೆ ಶೇ.99.67ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿದೆ.
*ಕಂದಾಯ ಸೇವೆಯಲ್ಲಿ ನಂಬರ್-1 ಅಬಾಧಿತ:*
ಮೇ ಮಾಹೆಯ ಅರ್ಜಿ ವಿಲೇವಾರಿಯಲ್ಲಿ ಎಲ್ಲಾ ಇಲಾಖೆಯನ್ನೊಳಗೊಂಡಂತೆ ಕಲಬುರಗಿ ಜಿಲ್ಲೆ 3ನೇ ಸ್ಥಾನದಲ್ಲಿದ್ದರೆ, ಇತ್ತ ಸುಮಾರು 65 ಸೇವೆಗಳನ್ನು ನೀಡುವ ಸರ್ಕಾರದ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಯು ಪ್ರಸಕ್ತ ಜೂನ್ ಮಾಹೆಯಲ್ಲಿ ಸಲ್ಲಿಕೆಯಾದ 2,77,647 ಪೈಕಿ ಶೇ. 100.77 ರೊಂದಿಗೆ 2,79,801 ವಿಲೇ ಮಾಡಿ ಜಿಲ್ಲೆಯ ಇಲಾಖೆಗಳಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಜಾತಿ-ಆದಾಯ, ವಾಸಸ್ಥಳ, 371ಜೆ ಮೀಸಲಾತಿ, ಸಿಂಧುತ್ವ, ಪಹಣಿ, ಮೊಟೇಷನ್, ಖಾತಾ, ಸಾಮಾಜಿಕ ಪಿಂಚಣಿ, ಕೃಷಿಯೇತರ ಭೂಮಿ ಪರಿವರ್ತನೆ ಹೀಗೆ ಅನೇಕ ಸೇವೆಗಳನ್ನು ಇಲಾಖೆ ಸಕಾಲನಡಿ ಕಾಲಮಿತಿಯಲ್ಲಿ ನೀಡುತ್ತಿದೆ.
ಇಂದು... ನಾಳೆ... ಇನ್ನಿಲ್ಲ , ಹೇಳಿದ ದಿನ ತಪ್ಪೊಲ್ಲ ! ಎಂಬ ಘೋಷವಾಕ್ಯದ ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು (ತಿದ್ದುಪಡಿ) ಅಧಿನಿಯಮ, 2014 ಕಾಯ್ದೆಯ ಸಕಾಲ ಯೋಜನೆಯಡಿ ರಾಜ್ಯದ 113 ಇಲಾಖೆ-ಸಂಸ್ಥೆಗಳ 1,373 ಸೇವೆಗಳನ್ನು ಕಾಲಮಿತಿಯಲ್ಲಿ ನೀಡಲಾಗುತ್ತಿದೆ. ಕಾಲಮಿತಿಯಲ್ಲಿ ಸೇವೆ ಸಿಗದೆ ಅರ್ಜಿದಾರ ಮೇಲ್ಮನವಿ ಸಲ್ಲಿಸಿದಲ್ಲಿ ಪ್ರತಿ ದಿನದ ವಿಳಂಬಕ್ಕೆ ಅಧಿಕಾರಿ-ಸಿಬ್ಬಂದಿಗಳಿಗೆ ದಂಡ ವಿಧಿಸಿ ಆ ಹಣ ಅರ್ಜಿದಾರರಿಗೆ ನೀಡುವ ಅಪರೂಪದ ಸೇವೆ ಇದಾಗಿದೆ.
*ತ್ವರಿತ ಸೇವೆಯೆ ನಮ್ಮ ಗುರಿ*
ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳ ಪ್ರಯತ್ನದ ಫಲವಾಗಿ ಜಿಲ್ಲೆ ಇಂದು ರಾಜ್ಯದಲ್ಲಿಯೆ ಮೂರನೇ ಸ್ಥಾನದಲ್ಲಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲಾ ಅಧಿಕಾರಿ-ಸಿಬ್ಬಂದಿಗಳಿಗೆ ವೈಯಕ್ತಿಕವಾಗಿ ಅಭಿನಂದಿಸುವೆ. ಮುಂದುವರೆದು ಕಳೆದ 2024ರ ಜುಲೈ ಮಾಹೆಯ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ನಂಬರ್ 1 ಸ್ಥಾನದಲ್ಲಿತ್ತು, ಅದನ್ನು ಕಾಯ್ದುಕೊಳ್ಳಲು ಪ್ರಯತ್ನಿಸಲಾಗುವುದಲ್ಲದೆ ತ್ವರಿತಗತಿಯಲ್ಲಿ ಜನರ ಬಾಗಿಲಿಗೆ ಸೇವೆ ಕಲ್ಪಿಸುವುದು ತಮ್ಮ ಪ್ರಥಮ ಗುರಿಯಾಗಿದೆ
*-ಬಿ.ಫೌಜಿಯಾ ತರನ್ನುಮ್*
*ಜಿಲ್ಲಾಧಿಕಾರಿ,ಕಲಬುರಗಿ*
*ಸಮಸ್ಯೆಗಳಿಗೆ ಸ್ಪಂದನೆ ಸೂಪರ್:*
ರಾಜ್ಯ ಸರ್ಕಾರವು ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಪ್ರಥಮಾದ್ಯತೆ ಮೇಲೆ ವಿಲೇವಾರಿ ಮಾಡಲು ಐ.ಪಿ.ಜಿ.ಆರ್.ಎಸ್. ಪೋರ್ಟಲ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಇದುವರೆಗೆ ಸ್ವೀಕೃತ 1,694 ಸಾರ್ವಜನಿಕ ಮನವಿ ಮತ್ತು ಕುಂದುಕೊರತೆಗಳಲ್ಲಿ 1,684 ಇತ್ಯರ್ಥ ಪಡಿಸಲಾಗಿದೆ. ಇನ್ನುಳಿದ 10 ಅರ್ಜಿ ವಿಲೇವಾರಿ ಹಂತದಲ್ಲಿದ್ಸು, ಈ ರೀತಿಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಡಳಿತ ವರ್ಗ ಮಾಡುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಡೆಸಿದ ಜನತಾ ದರ್ಶನದಲ್ಲಿ ಸ್ವೀಕೃತವಾಗಿರುವ ಎಲ್ಲಾ 1,613 ಅರ್ಜಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಜನತಾ ದರ್ಶನದಲ್ಲಿ ಜಿಲ್ಲೆಯಿಂದ ಸ್ವೀಕೃತ ವಾಗಿರುವ 310 ಅರ್ಜಿಗಳನ್ನು ಸಹ ಇತ್ಯರ್ಥ ಪಡಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಪ್ರಿಯಾಂಕಾ ಹೊಸಮನಿ