ಬೆಂಗಳೂರು, 17 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹಸಚಿವರ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗೆಲುವಿನ ಸಂಭ್ರಮಾಚರಣೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆಂಬ ಮಾಹಿತಿ ಇದ್ದರೂ ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮ ಆಯೋಜಿಸಿ ಭದ್ರತೆ ನೀಡಲಾಗದೇ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಪ್ರಚಾರದ ಗೀಳಿಗೆ ಅಮಾಯಕರ ಬಲಿ ಪಡೆದ ಸರ್ಕಾರದ ಜನಕಂಠಕ ನಿಲುವನ್ನು ಖಂಡಿಸಲಾಯಿತು.
ಜೂನ್ 4ನೇ ತಾರೀಕು ರಾಜ್ಯಾದ್ಯಂತ, ದೇಶಾದ್ಯಂತ ಆರ್ ಸಿಬಿ ಸಂಭ್ರಮಾಚರಣೆ ನಡೆಯುತ್ತಿದ್ದರೆ, ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ನಡುವೆ ಪೈಪೋಟಿ ನಡೆಯುತ್ತಿತ್ತು. ಆರ್ ಸಿಬಿ ಗೆಲುವಿನ ಸಂಭ್ರಮವನ್ನು ಸರ್ಕಾರದ ಜನಪ್ರಿಯತೆ ಹೆಚ್ಚಿಸಿಕೊಳ್ಳಬೇಕು ಎಂಬ ಪುಕ್ಕಟ್ಟೆ ಪ್ರಚಾರ ಪಡೆದುಕೊಳ್ಳುವ ಹಠ ಹಾಗೂ ಚಟಕ್ಕೆ ಬಿದ್ದು ಉಪಮುಖ್ಯಮಂತ್ರಿಗಳಂತೂ ಏರ್ಪೋರ್ಟ್ ಗೆ ಧಾವಿಸಿ ಕ್ರೀಡಾಪಟುಗಳನ್ನು ಸ್ವಾಗತಿಸಿ ಕ್ರೀಡಾಂಗಣದಲ್ಲಿ ಕಪ್ ಎತ್ತಿ ಹಿಡಿದು ತಾವೇ ಗೆದ್ದವರಂತೆ ಬಿಂಬಿಸಿಕೊಂಡರು. ಈ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ವರದಿ ಕೊಟ್ಟರೂ ಸಹ ಲೆಕ್ಕಿಸದೇ ಪುಕ್ಕಟ್ಟೆ ಪ್ರಚಾರದ ಗೀಳಿಗೆ ಬಿದ್ದು ಎರಡೂ ಕಡೆ ಕಾರ್ಯಕ್ರಮ ನಡೆಸಿದರ ಪರಿಣಾಮವಾಗಿ 11 ಮುಗ್ಧ ಜೀವಗಳ ಬಲಿ ತೆಗೆದುಕೊಂಡರು. ಈಗಲಾದರೂ ಭಂಡತನ ಬಿಟ್ಟು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಯಿತು.
ಇದೇ ವೇಳೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೋಲಿಸರು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ವಿಧಾನ ಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಅಶ್ವಥನಾರಾಯಣ, ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಹಾಗೂ ಆರ್ ಸಿಬಿ ಅಭಿಮಾನಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa