ದಾವಣಗೆರೆ, 16 ಜೂನ್ (ಹಿ.ಸ.) :
ಆ್ಯಂಕರ್ : ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿಯ ಹಸಿ ಸುಳ್ಳುಗಳಿಗೆ ತಕ್ಕ ಉತ್ತರ ನೀಡುವ ರೀತಿಯಲ್ಲಿ ಒಂದೇ ದಿನ 1350 ಕೋಟಿ ವಚ್ಚದ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆ ಜಿಲ್ಲೆಯ 1350 ಕೋಟಿ ನಾನಾ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಹಲವು ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, 56 ಇಂಚಿನ ಎದೆಯ ಪ್ರಧಾನಿ ಮೋದಿಯವರು ನಿರುಪಯುಕ್ತ ಆಗಿದ್ದಾರೆ. ಎದೆ ಎಷ್ಟು ಇಂಚು ಎನ್ನುವುದು ಮುಖ್ಯವಲ್ಲ. ಎದೆಯ ಒಳಗೆ ಬಡವರ ಮತ್ತು ಮಧ್ಯಮ ವರ್ಗದವರ ಬಗ್ಗೆ ಪ್ರೀತಿ, ಕಾಳಜಿ ಇಲ್ಲವಾಗಿದೆ ಎಂದು ಟೀಕಿಸಿದರು.
ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿಯ ಕುರುಡು ಕಣ್ಣುಗಳಿಗೆ ಅಭಿವೃದ್ಧಿ ಕಾಣುತ್ತಿಲ್ಲ. ಜನರ ಮನೆ ಬಾಗಿಲಿಗೆ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ತಲುಪುತ್ತಿವೆ. ನಮ್ಮ ಬಳಿ ಹಣ ಇಲ್ಲದೇ ಹೋಗಿದ್ದರೆ ಒಂದೇ ದಿನ 1350 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು.
ನಾವು ಗ್ಯಾರಂಟಿಗಳನ್ನು ಘೋಷಿಸಿದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರವರೆಗೂ, ಗ್ಯಾರಂಟಿಗಳು ಜಾರಿಯೇ ಆಗುವುದಿಲ್ಲ ಎಂದು ಹಸಿ ಹಸಿ ಸುಳ್ಳು ಹೇಳಿದ್ದರು. ಈಗ ಐದೂ ಗ್ಯಾರಂಟಿಗಳೂ ಜಾರಿ ಆಗಿವೆ. ಬಿಜೆಪಿಯ ಮತದಾರರೂ ಸೇರಿ ಇಡೀ ರಾಜ್ಯದ ಜನತೆ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ ಎಂದರು.
ರಾಜ್ಯದ ಬಜೆಟ್ ಗಾತ್ರ ಹೆಚ್ಚಾಗಿರುವುದು ಮಾತ್ರವಲ್ಲದೆ, ಜಿಎಸ್ ಟಿ ಸಂಗ್ರಹದಲ್ಲೂ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ರಾಜ್ಯದ ಆರ್ಥಿಕತೆ ಏರುಮುಖದಲ್ಲಿ, ಪ್ರಗತಿ ಪಥದಲ್ಲಿ ಇರುವುದಕ್ಕೆ ಸಾಕ್ಷಿ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಜನರಿಗೆ ಒಂದೇ ಒಂದು ಮನೆ ಕೊಡಲಿಲ್ಲ. ಆದರೆ ನಾವು ಬರೀ ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ ಪೌರ ಕಾರ್ಮಿಕ ವರ್ಗಕ್ಕೆ 1892 ಮನೆಗಳನ್ನು ವಿತರಿಸಿದ್ದೇವೆ ಎಂದರು.
ಸಮಾಜದ ಎಲ್ಲಾ ಜಾತಿ, ವರ್ಗ ಮತ್ತು ಸಮುದಾಯಗಳಿಗೆ ಆರ್ಥಿಕ ಶಕ್ತಿ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ನಾವು ಸಾಮಾಜಿಕ ನ್ಯಾಯದ ಕಾರ್ಯಗಳನ್ನು ಜಾರಿಗೊಳಿಸುತ್ತಾ ಸಮ ಸಮಾಜದ ಆಶಯವನ್ನು ಈಡೇರಿಸುತ್ತಿದ್ದೇವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa