ಬೆಂಗಳೂರು, 31 ಮೇ (ಹಿ.ಸ.) :
ಆ್ಯಂಕರ್ : ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗಿರುವ 15 ಗಂಟೆಗಳ ಪ್ರಯಾಣದ ಅವಧಿಯನ್ನು ಹತ್ತು ಗಂಟೆಗಳಿಗೆ ಇಳಿಸುವ ಸಂಬಂಧ ಕೇಂದ್ರ ರೈಲ್ವೆ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವುದಾಗಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈಗ ವಿಜಯಪುರ, ಬಾಗಲಕೋಟೆಗೆ ಹೋಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗಿನಲ್ಲಿ ಎಂಜಿನ್ ಬದಲಿಸಿಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಎರಡೂ ಕಡೆ ಬೈಪಾಸ್ ಮೂಲಕ ರೈಲುಗಳು ಸಾಗಿಹೋಗುವ ವ್ಯವಸ್ಥೆ ಆಗಬೇಕು. ಇದರಿಂದ ಗದಗ ಭಾಗದ ಜನತೆಗೂ ಅನುಕೂಲವಾಗುತ್ತದೆ. ಒಂದು ವೇಳೆ ಈಗಾಗಲೇ ಓಡುತ್ತಿರುವ ರೈಲುಗಳನ್ನು ಬೈಪಾಸ್ ಮೂಲಕ ಓಡಿಸುವುದು ಅಸಾಧ್ಯವಾದರೆ, ಹೊಸ ರೈಲುಗಳ ಸೇವೆಯನ್ನಾದರೂ ಆರಂಭಿಸಬೇಕು ಎಂದು ಕೇಳಿದ್ದು, ಸೋಮಣ್ಣನವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಶೀಘ್ರದಲ್ಲೇ ದೆಹಲಿಗೆ ತೆರಳುವ ಯೋಚನೆಯಿದ್ದು, ಸಚಿವರಾದ ಸೋಮಣ್ಣನವರನ್ನು ಭೇಟಿ ಮಾಡಿ, ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ನಮ್ಮ ಈ ಪ್ರಸ್ತಾಪವನ್ನು ಮುಂದಿನ ಹಂತಕ್ಕೆ ಒಯ್ಯಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa