ಬೆಂಗಳೂರು, 31 ಮೇ (ಹಿ.ಸ.) :
ಆ್ಯಂಕರ್ : ಸೌರಶಕ್ತಿ-ಪವನಶಕ್ತಿ ಉತ್ಪಾದನೆಯಲ್ಲಿ ಭಾರತ ಈಗ ಜರ್ಮನಿಗಿಂತ ಮುಂದಿದ್ದು, ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಹಸಿರು ಕ್ರಾಂತಿ, ಶುದ್ಧ ಇಂಧನ ಪರಿವರ್ತನೆಯಲ್ಲಿ ಜಾಗತಿಕ ನಾಯಕತ್ವದತ್ತ ಹೊರಳುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಒಂದು ರೀತಿ ʼಸ್ಟಾರ್ ಪ್ಲೇಯರ್ʼ ಆಗಿ ಹೊರ ಹೊಮ್ಮಿದೆ.
2030ರ ವೇಳೆಗೆ ಭಾರತ 500 ಗೀಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದು, ಇನ್ನಾರು ವರ್ಷಗಳಲ್ಲಿ ವಾರ್ಷಿಕ ಸುಮಾರು 50 ಗೀಗಾ ವ್ಯಾಟ್ ಹೊಸ ಸಾಮರ್ಥ್ಯವನ್ನು ಸೇರಿಸಲು ಯೋಜಿಸಿದೆ. 2024ರಲ್ಲಿ ಆಗಲೇ 25 ಗೀಗಾ ವ್ಯಾಟ್ ಗುರಿ ಸಾಧನೆ ಇದಕ್ಕೆ ನಿದರ್ಶನವಾಗಿದ್ದು, ಉತ್ತಮ ಆರಂಭ ತೋರಿದೆ. ಸರ್ಕಾರಿ ಏಜೆನ್ಸಿಗಳು 44 ಗೀಗಾ ವ್ಯಾಟ್ ನವೀಕರಿಸಬಹುದಾದ ಇಂಧನ ವಿದ್ಯುತ್ ಖರೀದಿಗೆ ಟೆಂಡರ್ ಹೊರಡಿಸಿದ್ದು, ಇದು ಗುರಿ ಸಾಧನೆಯತ್ತ ಸಕಾರಾತ್ಮಕ ಹೆಜ್ಜೆಯಾಗಿದೆ.
ನವೀಕರಿಸಬಹುದಾದ ಇಂಧನ ವಲಯದಲ್ಲಿ ʼಸೌರಶಕ್ತಿʼ ನಿಜಕ್ಕೂ ಭಾರತದ ʼಸ್ಟಾರ್ ಪ್ಲೇಯರ್'. 2014ರಲ್ಲಿ ಕೇವಲ 2.82 ಗೀಗಾ ವ್ಯಾಟ್ ಇದ್ದ ಸೌರಶಕ್ತಿ ಉತ್ಪಾದನೆ ಸಾಮರ್ಥ್ಯ ಈಗ 108 ಗೀಗಾ ವ್ಯಾಟ್ ಗಡಿ ದಾಟಿದೆ. ಮನೆ ಮನೆಯ ಛಾವಣಿಗಳಲ್ಲಿ ಸೌರ ಫಲಕಗಳು ಸೂರ್ಯ ಶಕ್ತಿಯನ್ನು ಸೆಳೆಯುತ್ತಿವೆ. ಹಳ್ಳಿ ಹಳ್ಳಿಗಳಿಗೆ ಬೆಳಕು ತೋರಿದೆ. ದೊಡ್ಡ ದೊಡ್ಡ ಕೈಗಾರಿಕೆಗಳಿಗೆ ಸೌರ ಪಾರ್ಕ್ಗಳ ಪವರ್ ತುಂಬಿದೆ.
ಮನೆ ತಾರಸಿಗೆ ಸೌರ ಫಲಕವೇ ರಕ್ಷಣಾ ಹೊದಿಕೆ:
ತಾರಸಿ ಮನೆಗಳಿಗೆ ಮಳೆ-ಬಿಸಿಲಿನಿಂದ ರಕ್ಷಣೆಗೆ ಪ್ಲಾಸ್ಟಿಕ್ ಹೊದಿಕೆ, ಶೀಟ್ ಹೊದಿಕೆ ಹಾಕುತ್ತಿದ್ದ ಜಾಗದಲ್ಲಿ ಈಗ ಸೌರ ಫಲಕಗಳು ರಾರಾಜಿಸುತ್ತಿವೆ. ನಗರ-ಹಳ್ಳಿಗಳೆನ್ನದೆ ಎಲ್ಲೆಡೆ ಮನೆಗಳ ಮೇಲೆ ಸೌರ ವಿದ್ಯುತ್ ಉತ್ಪಾದನೆಗೆ ಸೌರ ಫಲಕಗಳನ್ನು ಹೊದಿಸುತ್ತಿದೆ ʼಪಿಎಂ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ'.
13.3 ಲಕ್ಷ ಕುಟುಂಬಗಳಿಗೆ ಸೌರ ಬೆಳಕು:
ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆ ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಹೊಸ ಬದಲಾವಣೆ ತರುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ʼಸ್ವಾವಲಂಬಿ ಶಕ್ತಿʼಯನ್ನು ನಿರೂಪಿಸಿದೆ. ದೇಶದ ಸರಿಸುಮಾರು 13.3 ಲಕ್ಷ ಕುಟುಂಬಗಳಿಗೆ ಸೌರ ಬೆಳಕು ತೋರಿದೆ. ಕಳೆದ 10 ತಿಂಗಳಲ್ಲೇ ಸುಮಾರು 12 ಲಕ್ಷ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಲಕ್ಷಾಂತರ ಕುಟುಂಬಗಳನ್ನು ವಿದ್ಯುತ್ ಬಿಲ್ ಹೊರೆಯಿಂದ ಮುಕ್ತಿಗೊಳಿಸಿದೆ.
ಇಷ್ಟೇ ಅಲ್ಲ, ಸೌರ ಕೋಶ ಮತ್ತು ವೇಫರ್ಗಳ ಉತ್ಪಾದನೆಯಲ್ಲಿ ಸಹ ಭಾರತ ಮುಂಚೂಣಿಯಲ್ಲಿದೆ. ಸದ್ಯ 25 ಗೀಗಾ ವ್ಯಾಟ್ ಸೌರ ಕೋಶ, 2 ಗೀಗಾ ವ್ಯಾಟ್ ವೇಫರ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 2030ರ ವೇಳೆಗೆ ಕ್ರಮವಾಗಿ 100 ಗೀಗಾ ವ್ಯಾಟ್ ಮತ್ತು 40 ಗೀಗಾ ವ್ಯಾಟ್ ಗೆ ಕೊಂಡೊಯ್ಯುವ ಗುರಿಯತ್ತ ಸಾಗಿದೆ. ಇದು ವಿದೇಶಿ ಆಮದುಗಳ ಮೇಲಿನ ಅವಲಂಬನೆ ಬದಲಾಗಿ ʼಆತ್ಮನಿರ್ಭರ ಭಾರತ'ದ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.
ಮೇಡ್ ಇನ್ ಇಂಡಿಯಾ ಬಲ:
ಸೌರಶಕ್ತಿಯಲ್ಲಿ ಮುಂಚೂಣಿಯಲ್ಲಿರುವ ಭಾರತ ಅದರ ಮಾಡ್ಯೂಲ್ಗಳ ಉತ್ಪಾದನೆಗೂ ಹೆಜ್ಜೆಯಿರಿಸಿದೆ. ವಿದೇಶದಿಂದ ಸೌರ ಫಲಕ ತಂದು ಅಳವಡಿಸುವ ಬದಲಾಗಿ ಇಲ್ಲೇ ತಯಾರಿಸಿ ಅಳವಡಿಸುತ್ತಿದೆ. ಇದರಿಂದ ಸೌರ ವಿದ್ಯುತ್ ಘಟಕಗಳ ವೆಚ್ಚ ಶೇ.80ರಷ್ಟು ತಗ್ಗಿದೆ. ಜತೆಗೆ ಲಕ್ಷಾಂತರ ನಿರುದ್ಯೋಗಿಗಳ ಕೈಗೆ ಉದ್ಯೋಗ ಕೊಟ್ಟಿದೆ. ಗುಣಮಟ್ಟದ ಮಾಡ್ಯೂಲ್ಗಳನ್ನು ಸಿದ್ಧಪಡಿಸುತ್ತಿದೆ. 2014ರಲ್ಲಿ ಸೌರ ಮಾಡ್ಯೂಲ್ ಉತ್ಪಾದನೆಯಲ್ಲಿ ಬಹುತೇಕ ಶೂನ್ಯದಲ್ಲಿತ್ತು ಭಾರತ. ಕೇವಲ 2 ಗೀಗಾ ವ್ಯಾಟ್ ಸಾಮರ್ಥ್ಯವಿತ್ತು, ಆದರೆ 2024ರ ಹೊತ್ತಿಗೆ ಬೃಹತ್ 90 ಗೀಗಾ ವ್ಯಾಟ್ ಸಾಮರ್ಥ್ಯದ ಮೇಲ್ಪಂಕ್ತಿಯಲ್ಲಿದೆ. 2030ರ ವೇಳೆಗೆ ಇದನ್ನು 150 ಗೀಗಾ ವ್ಯಾಟ್ ಗೆ ವೃದ್ಧಿಸುವ ಮಹತ್ವಾಕಾಂಕ್ಷೆಯಲ್ಲಿದೆ.
ಹಸಿರು ಇಂಧನದಲ್ಲಿ ಹೊಸ ಸಂಚಲನ:
ಭಾರತ ಕೇವಲ ಸೌರ ಮತ್ತು ಪವನ ಶಕ್ತಿ ಮಾತ್ರವಲ್ಲ ಹಸಿರು ಇಂಧನದಲ್ಲೂ ಹೊಸ ಸಂಚಲನ ಮೂಡಿಸಿದೆ. ಹತ್ತು ವರ್ಷದ ಹಿಂದೆ ದೇಶದ ಒಟ್ಟು ಹಸಿರು ಇಂಧನ ಸಾಮರ್ಥ್ಯ ಕೇವಲ 75.52 ಗಿಗಾವಾಟ್ ಇತ್ತು. ಅದೀಗ ನಿರೀಕ್ಷೆ ಮೀರಿದೆ. ಅದ್ಭುತ ಎನ್ನುವಂತೆ 232 ಗೀಗಾ ವ್ಯಾಟ್ ಗೆ ಏರಿಕೆ ಅಂದರೆ ಮೂರು ಪಟ್ಟು ಬೆಳವಣಿಗೆ ಕಂಡಿದೆ.
ಇನ್ನು, ಜೈವಿಕ ವಿದ್ಯುತ್ ಉತ್ಪಾದನಾ ಸಾಮರ್ಥ್ಯವೂ ಶೇ.42ರಷ್ಟು ವೃದ್ಧಿಸಿದೆ. 8.1 ಗೀಗಾ ವ್ಯಾಟ್ ನಿಂದ 11.5 ಗೀಗಾ ವ್ಯಾಟ್ ತಲುಪಿದೆ. ಸಂಕುಚಿತ ಜೈವಿಕ ಅನಿಲ ಕ್ಷೇತ್ರವಂತೂ ಅದ್ಭುತ ಪ್ರಗತಿ ಸಾಧಿಸಿದೆ. 2014ರಲ್ಲಿ ಒಂದೇ ಒಂದು ಯೋಜನೆಯಿಂದ ಪ್ರತಿ ದಿನ ಕೇವಲ 8 ಟನ್ ಉತ್ಪಾದನಾ ಹಂತದಲ್ಲಿದ್ದ ಭಾರತ ಈಗ ಐತಿಹಾಸಿಕ 150 ಯೋಜನೆಗಳ ಮೂಲಕ 1,211 ಟನ್ ಸಾಮರ್ಥ್ಯ ತಲುಪಿದೆ. ನಮ್ಮ ಪವನ ಶಕ್ತಿಯೂ ಹಿಂದೆ ಬಿದ್ದಿಲ್ಲ. 2014ರ 21 ಗೀಗಾ ವ್ಯಾಟ್ ನಿಂದ ಈಗ 51 ಗೀಗಾ ವ್ಯಾಟ್ ಗೆ ದ್ವಿಗುಣಗೊಂಡಿದೆ. ಒಟ್ಟಾರೆ ಭಾರತದ ನವೀಕರಿಸಬಹುದಾದ ಇಂಧನ ಕ್ರಾಂತಿಗೆ ಈಗ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa