ಚಿಕ್ಕಮಗಳೂರು, 24 ಮೇ (ಹಿ.ಸ.) :
ಆ್ಯಂಕರ್ : ದಯೆಯೇ ಧರ್ಮದ ಮೂಲ ಎಂದು ಸಾರಿದವರು ವೀರಶೈವ- ಲಿಂಗಾಯತರು , ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಮಾಜ ನಮ್ಮದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಚಿಕ್ಕಮಗಳೂರಿನ ಶ್ರೀ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಶನಿವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ವಿಶ್ವ ಗುರು ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸಮಾಜದ ಮಗಳಾಗಿ ಕಾರ್ಯಕ್ರಮಕ್ಕೆ ಬಂದಿರುವೆ. ಬೇರೆ ಸಮಾಜದವರ ಜೊತೆಗೆ ಹಂಚಿಕೊಂಡು ತಿನ್ನುವ ಸಮಾಜ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಮಾಜ ನಮ್ಮದು ಎಂದರು.
ಕರ್ನಾಟಕದ ಮೂಲೆ ಮೂಲೆಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರು ಇದ್ದಾರೆ. ಸಮಾಜದ ಸೇವೆಯನ್ನು ಮಗಳಾಗಿ ಮಾಡುವೆ. ಇಡೀ ಕರ್ನಾಟಕ ರಾಜ್ಯಾದ್ಯಂತ ಸಮಾಜಕ್ಕೆ ಸೇವೆ ಮಾಡುವೆ ಎಂದು ಸಚಿವರು ಹೇಳಿದರು.
ಎಂದೆಂದಿಗೂ ಶಾಶ್ವತವಾಗಿ ಉಳಿಯುವಂತಹ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು 12ನೇ ಶತಮಾನದಲ್ಲೆ ಸಾರಿದ ಮಹಾನ್ ವ್ಯಕ್ತಿ ಬಸವೇಶ್ವರರು, ಇವರ ತತ್ವ ಆದರ್ಶಗಳು ನಮಗೆ ಮಾದರಿಯಾಗಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa