ಗ್ರಾ.ಪಂ. ಉಪಚುನಾವಣೆ : ಶಸ್ತ್ರಾಸ್ತ್ರಗಳ ಠೇವಣಿಗೆ ಆದೇಶ
ಕೊಪ್ಪಳ, 23 ಮೇ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಎರಡು ಗ್ರಾಮ ಪಂಚಾಯತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಮೇ 25 ರಂದು ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಿಸಿದ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು, ಗಣ್ಯವ್
ಗ್ರಾ.ಪಂ. ಉಪಚುನಾವಣೆ : ಶಸ್ತ್ರಾಸ್ತ್ರಗಳ ಠೇವಣಿಗೆ ಆದೇಶ


ಕೊಪ್ಪಳ, 23 ಮೇ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಎರಡು ಗ್ರಾಮ ಪಂಚಾಯತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಮೇ 25 ರಂದು ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಿಸಿದ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು, ಗಣ್ಯವ್ಯಕ್ತಿಗಳು ಹಾಗೂ ಇತರರು ಹೊಂದಿರುವ ಶಸ್ತ್ರಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಆದೇಶಿಸಿದ್ದಾರೆ.

ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮ ಪಂಚಾಯತಿ ಹಾಗೂ ಯಲಬುರ್ಗಾ ತಾಲ್ಲೂಕಿನ ಗಾಣದಾಳ ಗ್ರಾಮ ಪಂಚಾಯತಿಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಸದಸ್ಯ ಸ್ಥಾನಗಳಿಗೆ ಮೇ 25 ರಂದು ಚುನಾವಣೆ ನಡೆಯಲಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಠಿಯಿಂದ ಚುನಾವಣೆ ನಡೆಯುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ರೈತರು, ಗಣ್ಯವ್ಯಕ್ತಿಗಳು ಮತ್ತು ಇತರರು ಹೊಂದಿರುವ ಶಸ್ತ್ರಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವುದು ಅವಶ್ಯಕವಾಗಿರುವುದರಿಂದ ಶಸ್ತ್ರಾಸ್ತ್ರಗಳ ಅಧಿನಿಯಮ, 1959 ಕಲಂ 21, 24ಎ ಮತ್ತು 24ಬಿ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಶಸ್ತ್ರಗಳ ಠೇವಣಿಗೆ ಆದೇಶ ಹೊರಡಿಸಿದ್ದಾರೆ.

ನಿಗದಿತ ಅವಧಿಯೊಳಗೆ ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡದೇ ಇರುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 223 ರನ್ವಯ ಕ್ರಮ ಕೈಗೊಳ್ಳುವಂತೆ ಹಾಗೂ ಗ್ರಾಮ ಪಂಚಾಯತಿ ಉಪ ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ನಂತರ ನಿಯಮಾನುಸಾರ ಪರವಾನಿಗೆದಾರರ ವಶಕ್ಕೆ ನೀಡಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಈ ಆದೇಶವು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಹಾಗೂ ಆರ್.ಬಿ.ಐ ನಿಂದ ಮಾನ್ಯತೆ ಪಡೆದಿರುವ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande