ಹುಬ್ಬಳ್ಳಿ, 09 ಮಾರ್ಚ್ (ಹಿ.ಸ.) :
ಆ್ಯಂಕರ್ : ಮಾದಕವಸ್ತುಗಳ ಮತ್ತು ಸಂಚಾರ ನಿಯಮಗಳ ಬಗ್ಗೆ ನಿರಂತರವಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಜನಜಾಗೃತಿ ಮೂಡಿಸಲಾಗುತ್ತಿದೆ. ಅವಳಿನಗರ ಅಪರಾಧ ಮುಕ್ತವಾಗಿ ಮಾಡಲು ಪೊಲೀಸ ಮತ್ತು ಜಿಲ್ಲಾಡಳಿತದೊಂದಿಗೆ ಯುವಸಮೂಹ ಕೈ ಜೋಡಿಸಬೇಕು ಮತ್ತು ಸಹಕಾರ ನೀಡಬೇಕೆಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಮಹಾನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಡ್ರಗ್ಸ್, ಅಪರಾಧ ಮುಕ್ತ ನಗರವಾಗಿ ಮಹಾನಗರ ಸೇರಿದಂತೆ ಧಾರವಾಡ ಜಿಲ್ಲೆ ರೂಪಿಸಲು ಹಮ್ಮಿಕೊಂಡಿದ್ದ ಪೊಲೀಸ್ ಹಾಗೂ ನಾಗರಿಕರಿಂದ ಕೂಡಿದ್ದ ಪೊಲೀಸ್ ರನ್- 2025 ಮ್ಯಾರಾಥನ್ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಕೇವಲ ದಿನಾಚರಣೆಗಳಿಂದ ನಮ್ಮ ಉದ್ದೇಶ ಸಫಲವಾಗುವದಿಲ್ಲ. ಅದನ್ನು ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಅನುಷ್ಠಾನಕ್ಕೆ ತಂದಾಗ ಸಾರ್ಥಕವಾಗುತ್ತದೆ. ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಪೊಲೀಸ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅಪರಾಧಗಳ ಸಂಖ್ಯೆ ಇಳಿಮುಖವಾಗಿದೆ ಎಂದರು.
ಇಲಾಖೆಗಳು ಹೆಚ್ಚು ಜನಪರ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಮತ್ತು ಸಕ್ರಿಯವಾಗಿ ಪಾಲ್ಗೋಳ್ಳುವಿಕೆ ಮುಖ್ಯವಾಗಿದೆ. ಡ್ರಗ್ಸ್ ನಿಯಂಯ್ರಣಕ್ಕೆ ಹಾಗೂ ರಸ್ತೆ ಅಪಘಾತಗಳನ್ನು ತಪ್ಪಿಸಿ ಸಂಚಾರ ನಿಯಮಗಳನ್ನು ಉತ್ತಮವಾಗಿ ನಿರ್ವಹಿಸಲು ಯುವಕ, ಯುವತಿಯರ ಸಹಕಾರ ಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ, ಸಕ್ರಿಯವಾಗಿ ಭಾಗವಹಿಸಬೇಕು. ಪೊಲೀಸ್ ರನ್-2025 ಗೆ ಯುವ ಸಮೂಹದಿಂದ ಉತ್ತಮ ಸ್ಪಂದನೆ ಮೂಡಿದೆ ಎಂದು ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa