ಕೋಲಾರ, ೦೯ ಮಾರ್ಚ್ (ಹಿ.ಸ) :
ಆ್ಯಂಕರ್ : ಇವತ್ತಿನ ಚುನಾವಣೆ ಎಂಬುದು ಈಗ ದಂಧೆಯಾಗಿ ಮಾರ್ಪಟ್ಟಿದೆ. ದುಡ್ಡಿಲ್ಲದೆ ರಾಜಕಾರಣ ಇಲ್ಲ ಎಂಬ0ಥ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ದುಡ್ಡು ಹಾಕಿ ದುಡ್ಡು ತೆಗೆಯುವ ಕೆಲಸವಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ಜೆಡಿಯು ರಾಜ್ಯ ಅಧ್ಯಕ್ಷ ಮಹಿಮಾ ಜೆ ಪಟೇಲ್ ಬೇಸರ ವ್ಯಕ್ತಪಡಿಸಿದರು.
ಕೋಲಾರ ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿರುವ ಡಾ.ನಾಗರಾಜ್ ಅವರ ನಿವಾಸದಲ್ಲಿ ಭಾನುವಾರ ಡಾ.ನಾಗರಾಜ್ ಗೆಳೆಯರ ಬಳಗ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣ ಎಂದರೆ ಬರೀ ಚುನಾವಣೆ ಅಲ್ಲ. ಉತ್ತಮ ಆಡಳಿತ ಬರಬೇಕು. ಹಣ, ಹೆಂಡ ಇಲ್ಲದೆ ಚುನಾವಣೆ ಗೆಲ್ಲಬಹುದು ಎಂಬ ಸಾಧ್ಯತೆ ಇದೆ ಎಂಬುದನ್ನು ತೋರಿಸಬೇಕು ಎಂದರು.
ದೇಶದಲ್ಲಿ ೧೯೪೭ರಲ್ಲಿ ಸ್ವಾತಂತ್ರ‍್ಯ ಸಿಕ್ಕಿದ್ದರೂ ಒಂದು ರೀತಿಯ ಬಂಧನವನ್ನು ಅನುಭವಿಸುತ್ತಿದ್ದೇವೆ. ಕೃಷಿಗೆ ವಿಪರೀತ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೇವೆ, ಪರಿಸರ ಹಾಳಾಗುತ್ತಿದೆ. ಗ್ಲೋಬಲ್ ವಾರ್ಮಿಂಗ್ (ಜಾಗತಿಕ ತಾಪಮಾನ) ಹೋಗಿ ಗ್ಲೋಬಲ್ ಬರ್ನಿಂಗ್ (ಜಾಗತಿಕ ಸುಡುವಿಕೆ) ಆಗಿದೆ. ಈ ಸಂಬ0ಧ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ಕಾದಿದೆ ಎಂದು ಎಚ್ಚರಿಸಿದರು.
ವಿಕಾಸ ಕ್ರಾಂತಿ ಮಾಡಬೇಕು ಸಂಪೂರ್ಣ ಸಾವಯವ ರಾಜ್ಯ ಆಗಬೇಕು. ಆಡಳಿತ, ಶಿಕ್ಷಣ, ಕೃಷಿ ಆರೋಗ್ಯ, ಪರಿಸರ ಕ್ಷೇತ್ರದಲ್ಲಿ ಹೊಸ ಚಳವಳಿ ಆರಂಭಿಸಬೇಕು. ರಾಜ್ಯದಲ್ಲಿ ಮೂರು ಸಾವಿರ ಮಠಗಳಿವೆ. ಅವರು ನಮ್ಮ ಜೊತೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಮಾರ್ಚ್ ೨೪ಕ್ಕೆ ಕೊಟ್ಟೂರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದು, ಸ್ವಾಮೀಜಿಗಳು ಭಾಗವಹಿಸುತ್ತಿದ್ದಾರೆ. ರಾಜ್ಯದಲ್ಲಿ ಸೂಕ್ಷ್ಮತೆ ಉಳಿಸಿಕೊಂಡ ಶಾಸಕರು ಇದ್ದು, ಅವರ ಸಮ್ಮುಖದಲ್ಲಿ ಏಪ್ರಿಲ್ ೩, ೪ರಂದು ಸಾಣೇಹಳ್ಳಿಯಲ್ಲಿ ಪಕ್ಷಾತೀತವಾಗಿ ಚುನಾವಣಾ ಸುಧಾರಣೆ ಬಗ್ಗೆ ಚರ್ಚೆ ಹಮ್ಮಿಕೊಳ್ಳಲಾಗಿದೆ ಎಂದರು.
ಮು0ಬರಲಿರುವ ೨೦೨೫ ರ ಅಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಯು ಪಕ್ಷದಿಂದ ಅಭ್ಯರ್ಥಿಯಾಗಿ ಡಾ.ನಾಗರಾಜ್ ಅವರಂಥವರನ್ನು ಮಾಡಲಾಗಿದೆ ಅವರನ್ನು ಗೆಲ್ಲಿಸಬೇಕು ಇದಕ್ಕೆ ಸಮಾನ ಮನಸ್ಕ ಗೆಳೆಯರು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಲ್ಲಂಡೂರು ಡಾ.ಕೆ.ನಾಗರಾಜ್ ಮಾತನಾಡಿ, ಜೆಡಿಯು ಪಕ್ಷದಿಂದ ವಿಧಾನ ಪರಿಷತ್ ಹೋಗಲು ಪದವೀಧರ ಕ್ಷೇತ್ರದಿಂದ ಟಿಕೆಟ್ ನೀಡಿ ಅವಕಾಶ ಮಾಡಿಕೊಟ್ಡಿದ್ದಾರೆ. ಹಣ ಇಲ್ಲದ ಚುನಾವಣೆ ಗೆಲ್ಲಬಹುದು ಎಂಬುದನ್ನು ತೋರಿಸಿಕೊಡುತ್ತೇವೆ. ಹಣ ಖರ್ಚು ಮಾಡದೆ ಎದುರಿಸಿದಾಗ ಯಾವುದೇ ಭಯ ಇರುವುದಿಲ್ಲ. ಪಾರದರ್ಶಕ ರಾಜಕಾರಣಕ್ಕೆ ಒತ್ತು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಬಲ ನಾರಾಯಣಪ್ಪ, ದಕ್ಷಿಣ ಭಾರತ ಕುಂಬಾರ ಕುಲಾಲ್ ಫೆಡರೇಶನ್ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ, ಕಸ್ತೂರಿ ಜನಪರ ವೇದಿಕೆ ರಾಜ್ಯ ಅಧ್ಯಕ್ಷ ನಿಲೇಶ್ ಗೌಡ, ಕಸಾಪ ಮಾಜಿ ಅಧ್ಯಕ್ಷ ನಾಗನಂದ್ ಕೆಂಪರಾಜು, ಮಾಜಿ ಗೌರವ ಕಾರ್ಯದರ್ಶಿ ರತ್ನಪ್ಪ, ಸಿನಿಮಾ ನಟ ವಿಧ್ಯಾಬಾರಣ್, ಹೈಕೋರ್ಟ್ ವಕೀಲ ನಟರಾಜ್, ಲಕ್ಷ್ಮೀ ಗ್ರೂಪ್ ಆಫ್ ಹಾಸ್ಪಿಟಲ್ ಮುಖ್ಯಸ್ಥ ಡಾ.ಸಾಂಭಶಿವ, ಬಿಜೆಪಿ ಮುಖಂಡ ಪ್ರಕಾಶ್ ಮುಖಂಡರಾದ ಲಕನ್, ಗಂಗಾರಾಜು, ರಂಗನಾಥ್ ಮುಂತಾದವರು ಇದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ ಪಟೇಲ್, ಡಾ. ನಾಗರಾಜ್ ಗೆಳೆಯರ ಬಳಗವನ್ನು ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್