ಧಾರವಾಡ, 09 ಮಾರ್ಚ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರಕಾರವು ಯುವಕರ ಉದ್ಯೋಗಕ್ಕೆ ಆದ್ಯತೆ ನೀಡಿದೆ. ನಿರುದ್ಯೋಗಿ ಯುವಕರಿಗೆ ಆರ್ಥಿಕ ಭದ್ರತೆ ಹಾಗೂ ಕೌಶಲ್ಯ ಹೆಚ್ಚಳ ಹಾಗೂ ಉದ್ಯೋಗ ಹುಡಕಲು ಅನುಕೂಲವಾಗುವಂತೆ ಯುವನಿಧಿ ಗ್ಯಾರಂಟಿ ಯೋಜನೆ ಮೂಲಕ ಪ್ರತಿ ತಿಂಗಳು ನಿರ್ಧಿಷ್ಟ ಅವಧಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಉದ್ಯೋಗ ಮೇಳದ ನಂತರ ತಾಲೂಕು ಹಾಗೂ ವಿಧಾನ ಸಭಾ ಕ್ಷೇತ್ರ ಹಂತದಲ್ಲಿ ಬೃಹತ್ತ ಉದ್ಯೋಗ ಮೇಳಗಳ ಆಯೋಜನೆಗೆ ಸರಕಾರದ ಹಂತದಲ್ಲಿ ನಿರ್ಧರಿಸಲಾಗಿದೆ ಎಂದು ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದ್ದಾರೆ.
ಇಂದು ಧಾರವಾಡ ನಗರದ ಕೆಸಿಡಿ ಆವರಣದ ಡಾ.ವಿ.ಕೃ.ಗೋಕಾಕ ಕೇಂದ್ರ ಗ್ರಂಥಾಲಯ ಆವರಣ ಹಾಗೂ ಕಾಲೇಜಿನ ವಿಭಾಗಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ಉದ್ಯೋಗ ಮೇಳ-2025 ಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರವು ಎಲ್ಲ ಕ್ಷೇತ್ರಗಳಂತೆ ಉದ್ಯಮ ಮತ್ತು ಉದ್ಯೋಗ ಕ್ಷೇತ್ರಕ್ಕೂ ಆದ್ಯತೆ ನೀಡಿದೆ. ಉತ್ತರ ಕರ್ನಾಟಕದಲ್ಲಿ ಉದ್ಯಮಗಳ ಹೆಚ್ಚಳಕ್ಕೆ ಮುತುವರ್ಜಿ ವಹಿಸಿದೆ. ಇನ್ವೆಸ್ಟ್ ಕರ್ನಾಟಕ ಸಮ್ಮೇಳನದ ಮೂಲಕ ದೇಶ, ವಿದೇಶಗಳ ಕೈಗಾರಿಕೊದ್ಯಮಿಗಳನ್ನು ಉತ್ತರ ಕರ್ನಾಟಕ, ವಿಶೇಷವಾಗಿ ಹುಬ್ಬಳ್ಳಿ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಆಹ್ವಾನಿಸಿದ್ದು, ಹಲವಾರು ಉದ್ಯಮಗಳು ಬಂಡವಾಳ ಹೂಡಿ, ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬಂದಿವೆ. ಇದರಿಂದ ನಮ್ಮ ಭಾಗದ, ನಮ್ಮ ಜಿಲ್ಲೆಯ ಯುವಕ, ಯುವತಿಯರಿಗೆ ಉದ್ಯೋಗದಲ್ಲಿ ಹೆಚ್ಚು ಆದ್ಯತೆ ದೊರಕಲಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa