ಕೋಲಾರ, ೦೮ ಮಾರ್ಚ್ (ಹಿ.ಸ) :
ಆ್ಯಂಕರ್ : ಜಿಲ್ಲಾ ಹಾಗೂ ಎಲ್ಲಾ ತಾಲ್ಲೂಕು ನ್ಯಾಯಾಲಯಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಈ ವರ್ಷದ ಮೊದಲ ರಾಷ್ಟ್ರೀಯ ಜನತಾ ನ್ಯಾಯಾಲಯ ಹಮ್ಮಿಕೊಂಡಿದ್ದು, ರಾಜೀ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. ಈ ಅದಾಲತ್ ನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎ.ಮಂಜುನಾಥ ಕರೆ ನೀಡಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಶನಿವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟೀಯ ಲೋಕ್ ಅದಾಲತ್ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದರಿ ರಾಷ್ಟ್ರೀಯ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ಹೇಳಿದರು.
ಮಾನವ ನೆಮ್ಮದಿಗಾಗಿ ಬದುಕಲು ಹಣ ಮಾಡಬೇಕು. ವಿನಾಕಾರಣ ಹಣದಿಂದಲ್ಲೇ ಸಂಬ0ಧ ಹಾಗೂ ಮನಸ್ಸು ಹಾಳು ಮಾಡಿಕೊಳ್ಳಬಾರದು. ಸಹಬಾಳ್ವೆಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ಸಮಾನತೆ ಆದಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಹಿಳಾ ದಿನಾಚರಣೆ ಮಾಡುವ ದೇಶದಲ್ಲಿ ಆ ದೇಶಕ್ಕೆ ಕೊಡುಗೆ ನೀಡಿದ, ಸಮಾಜಕ್ಕೆ ಮಾದರಿಯಾದ ಮಹಿಳೆಯರ ಸಾಧನೆಯನ್ನು ನೆನೆದು ಗೌರವಿಸಲಾಗುತ್ತದೆ. ಎಷ್ಟೋ ರಾಷ್ಟ್ರಗಳು ತಮ್ಮ ದೇಶಕ್ಕೆ ಕೊಡುಗೆ ನೀಡಿದ ಮಹಿಳೆಯರ ಸಾಧನೆಯನ್ನು ಸಾರುವ ಪಠ್ಯಕ್ರಮವನ್ನು ಅಳವಡಿಸಿವೆ. ಉದಾಹರಣೆಗೆ ಕರ್ನಾಟಕದಲ್ಲಿ ವೀರ ವನಿತೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ವಚನ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದ ಅಕ್ಕಮಹಾದೇವಿ ಹೀಗೆ ಹಲವರ ಕುರಿತಂತೆ ಪಾಠಗಳಿದ್ದು ಅವರ ಕೊಡುಗೆ ಹಾಗೂ ಸಾಧನೆಯ ಸ್ಮರಣಾರ್ಥವಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಮಾತನಾಡಿ, ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗೌರವಿಸಲು ಹಾಗೂ ಇತರರಿಗೆ ಮಾದರಿಯಾಗಲು ಈ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ ಎಂದು ಹೇಳಿದರು.
ಬೇರೆಯವರ ಮೇಲೆ ಅವಲಂಭಿತವಾಗಿರದೇ ತನ್ನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ಮಹಿಳೆ ಇಂದು ಸಾಹಸವನ್ನು ಪಡುತ್ತಿದ್ದಾಳೆ. ಹೀಗಾಗಿ ಇಂತಹ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ಸಮಾಜ ನಮ್ಮದಾಗಬೇಕು. ಹೆಣ್ಣಾಗಿ ಹುಟ್ಟಿರುವುದೇ ಒಂದು ಮಹಾಸೌಭಾಗ್ಯ ಮತ್ತು ಮಹಾಶಕ್ತಿ. ಹೀಗಾಗಿ ಅದನ್ನು ನಾವು ಸಂತಸದಿ0ದ ನಾವು ಸಂಭ್ರಮಿಸೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ನಿರ್ಮಲಾದೇವಿ, ಪಿ.ಕೆ.ದಿವ್ಯ, ಕೆ.ಬಿ.ಪ್ರಸಾದ್, ಸುನೀಲ ಎಸ್ ಹೊಸಮನಿ, ಎಸ್.ಶಕುಂತಲಾ, ಆರ್.ನಟೇಶ್, ರೆಹಾನ ಸುಲ್ತಾನ, ಎಂ.ವಿ.ಲಕ್ಷ್ಮಿ, ಶ್ರೀನಿವಾಸ ಪಾಟೀಲ್, ಚೇತನ ಆರಿಕಟ್ಟಿ, ಪಿ.ಮದನ್, ಜಿ.ಹರ್ಷ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಉಪಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಎನ್.ಬೈರಾರೆಡ್ಡಿ, ವಕೀಲರು, ನ್ಯಾಯಾಲಯ ಸಿಬ್ಬಂದಿ, ಎಸ್.ಬಿ.ಐ ಮತ್ತು ಕೆನರಾ ಬ್ಯಾಂಕ್ ವ್ಯವಸ್ಥಾಪಕರು, ಕಾನೂನು ವಿದ್ಯಾರ್ಥಿಗಳು, ಕಕ್ಷಿದಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಚಿತ್ರ : ಕೋಲಾರದಲ್ಲಿ ನಡೆದ ರಾಷ್ಟಿಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಸೆಷನ್ಸ್ ನ್ಯಾಯಾಧೀಶ ಮಂಜುನಾಥ್ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್