ರಾಯಚೂರು, 08 ಮಾರ್ಚ್ (ಹಿ.ಸ.) :
ಆ್ಯಂಕರ್ : ಮಹಿಳೆಯರ ರಕ್ಷಣೆಗೆ ದೇಶದಲ್ಲಿ ಸಾಕಷ್ಟು ಕಾನೂನುಗಳಿದ್ದು, ಅವುಗಳನ್ನು ಮಹಿಳೆಯರು ಸರಿಯಾಗಿ ಅರ್ಥೈಸಿಕೊಳ್ಳಬೇಕು. ದೇಶದ ಬೆಳವಣಿಗೆಯಲ್ಲಿ ಭಾಗಿಯಾಗಬೇಕೆಂದು ಗೌರವಾನ್ವಿತ ಹೈಕೋರ್ಟ್ ನ್ಯಾಯಾಧೀಶರು ಆಗಿರುವ ರಾಯಚೂರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಎಮ್.ಜಿ. ಉಮಾ ಅವರು ಹೇಳಿದ್ದಾರೆ.
ಮಾ08ರ ಶನಿವಾರ ದಂದು ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಲೋಕ ಅದಾಲತ್ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ಹಿಂದಿನಿಂದಲೂ ಮಹಿಳೆಯರ ಮೇಲೆ ಒಂದಾಲ್ಲ ಒಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ದೌರ್ಜನ್ಯದ ದಿನಗಳು ಕೊನೆಯಾಗಬೇಕು. ಮಹಿಳೆಯರು ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ದೇಶದಲ್ಲಿ ಕಾನೂನು ಜಾರಿಯಲ್ಲಿವೆ. ಈ ಕಾನೂನಗಳನ್ನು ತಿಳಿದು ಬಳಸಬೇಕು ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶವನ್ನು ಮಹಿಳೆಯರು ಅರಿಯಬೇಕು. ಮಹಿಳೆಯನ್ನು ತಾಯಿ ಮತ್ತು ಭೂಮಿಗೆ ಹೋಲಿಕೆ ಮಾಡಲಾಗುತ್ತದೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಇದ್ದಾರೆ. ಮಹಿಳೆಯರು ಯಾವಾಗಲೂ ಕ್ರಿಯಾಶೀಲರಾಗಿ ವಿಶೇಷ ಸಾಧನೆಗಳನ್ನು ಮಾಡಬೇಕು ಎಂದು ಹೇಳಿದರು.
ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಮಹಿಳೆಯರು ಬಾಳಿನಲ್ಲಿ ಬೆಳಕಾಗುತ್ತಾರೆ ಎಂದರು.
ವೈಯಕ್ತಿಕವಾಗಿ ಮನೆಯ ಅರ್ಧ ಜವಾಬ್ದಾರಿಯನ್ನು ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಎಂಜಿನಿಯರ್ ಆಗಿ, ವಿಜ್ಞಾನಿ, ಪೈಲೆಟ್ ಆಗಿ ಕೂಡ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಮಹಿಳೆಯರು ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾರೆ ಎಂದರು.
ರಾಯಚೂರಿನ ಜಿಲ್ಲಾ ನ್ಯಾಯಾಲಯಕ್ಕೆ ಬಹಳ ದಿನದ ಇತಿಹಾಸವಿದೆ. ಇತಿಹಾಸವನ್ನು ಅರಿತು ಮಹಿಳಾ ನ್ಯಾಯವಾದಿಗಳು ಉತ್ತಮ ಕಾರ್ಯನಿರ್ವಹಣೆ ಮಾಡಬೇಕು. ಅವಕಾಶಗಳು ಸಿಕ್ಕಾಗ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮಹಿಳೆಯರು ಮೊದಲು ಸ್ಪಷ್ಟ ಗುರಿಗಳನ್ನು ಹೊಂದಬೇಕೆಂದು ಸಲಹೆ ನೀಡಿದರು.
ಲೋಕ ಅದಾಲತ್‍ನಲ್ಲಿ ಕಕ್ಷಿದಾರರಿಗೆ ನ್ಯಾಯವನ್ನು ಒದಗಿಸಬೇಕು. ನ್ಯಾಯಾಲಯದೊಂದಿಗೆ ನ್ಯಾಯವಾದಿಗಳು ಮುತುವರ್ಜಿ ವಹಿಸಿ ಪ್ರಕರಣಗಳನ್ನು ಹೆಚ್ಚಿನ ಮಟ್ಟದಲ್ಲಿ ಇತ್ಯರ್ಥಪಡಿಸಬೇಕು ಎಂದರು.
ಈ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ಪ್ರೇರಣೆಯಾಗಬೇಕು. ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ಮಹಿಳೆಯರು ನೀಡಬೇಕು. ಕುಟುಂಬದ ಸದಸ್ಯರ ಸಾಧನೆಯನ್ನು ಗುರುತಿಸಲು ಮಹಿಳೆಯರು ಶ್ರಮಿಸಬೇಕೆಂದು ಹೇಳಿದರು.
ಈ ವೇಳೆ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಮಾರುತಿ ಎಸ್.ಬಾಗಡೆ ಅವರು ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಕಾಲಿಟ್ಟಿದ್ದು, ಅವರ ಸಾಧನೆಯು ಮೆಚ್ಚುವಂತದ್ದಾಗಿದೆ. ಮಹಿಳೆಯರು ಇನ್ನೂ ಹೊಸ ಹೊಸ ಕ್ಷೇತ್ರದಲ್ಲಿ ಮುಂದೆ ಬರಬೇಕು. ಮಹಿಳಾ ನ್ಯಾಯವಾದಿಗಳು ಅಧ್ಯಯನಶೀಲರಾಗಬೇಕು ಎಂದರು.
ಈ ವೇಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸುವ ಮೂಲಕ ಪರಸ್ಪರ ಶುಭಾಶಗಳನ್ನು ವಿನಿಮಯ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶ್ರೀಕಾಂತ್ ಎಸ್.ವಿ., 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹತ್ತಿಕಾಳ್ ಪ್ರಭು ಸಿದ್ದಪ್ಪ, ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಸಿದ್ದರಾಮಪ್ಪ ಕಲ್ಯಾಣರಾವ್, ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್, ಅಪರ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಸುದೀನ್ ಕುಮಾರ್ ಡಿ.ಜೆ., 2ನೇ ಹೆಚ್ಚುವರಿ ಹಿರಿಯ ಶ್ರೇಣಿ ವ್ಯವಹಾರ ನ್ಯಾಯಾಧೀಶರಾದ ಶ್ವೇತಾ ಸಿಂಗ್, 3ನೇ ಅಪರ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಅನೀಲ್ ಶೇಖಣ್ಣನವರ್, ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರಾದ ಹುಲಗಪ್ಪ ಡಿ., ವಕೀಲರ ಸಂಘದ ಜಿಲ್ಲಾಧ್ಯಕ್ಚರಾದ ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್