ಹೊಸಪೇಟೆ, 8 ಮಾರ್ಚ್ (ಹಿ.ಸ.) :
ಆ್ಯಂಕರ್ : ಮಹಿಳೆಯರ ಏಳ್ಗೆಗೆ ಸಮಾಜದಲ್ಲಿ ಸಹಬಾಳ್ವೆ ಸಮಾನ ಗೌರವ ಮತ್ತು ಸಮಾನ ನ್ಯಾಯ ನೀಡಬೇಕಾದ ಅಗತ್ಯವಿದೆ ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸಪೇಟೆ ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು,
ಮಹಿಳೆಯರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಬದ್ಧವಿದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಸಾಧಿಸಲು ಪುರುಷ ಸಮಾಜದ ಸಹಕಾರ, ಪ್ರೋತ್ಸಾಹ ಅಗತ್ಯ. ಈಗಾಗಲೇ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಇದ್ದಾರೆ. ಆಟೋ ಓಡಿಸುವುರಿಂದ ಹಿಡಿದು ಪೈಲೆಟ್ ವರೆಗೂ, ಗ್ರಾಪಂ ಸದಸ್ಯರಿಂದ ರಾಷ್ಟ್ರಪತಿಯವರಿಗೂ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಇದ್ದಾರೆ. ರಾಜಕೀಯ ಮತ್ತು ಅರ್ಥಿಕ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರಲು ಇನ್ನಷ್ಟು ಅವಕಾಶಗಳನ್ನು ಒದಗಿಸಬೇಕಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಕಲ್ಪಿಸುವುದು ನಮ್ಮ ಕರ್ತವ್ಯವಾಗಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್.ನಿಯಾಜಿ ಮಾತನಾಡಿ, ಸರ್ಕಾರ ಮಹಿಳೆಯರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನ ಭಾಗ್ಯ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದೆ. ಮಹಿಳೆಯರನ್ನು ಹೆಚ್ಚು ಗೌರವಿಸುವ ಸರ್ಕಾರ ಇದಾಗಿದೆ ಎಂದರು.
ಬಳಿಕ ನಗರದ ಡಾ.ಪುನಿತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಿಂದ ಹಂಪಿಯ ಮಹಾನವಮಿ ದಿಬ್ಬದವರೆಗೂ ಬೈಕ್ ರ‌್ಯಾಲಿಯನ್ನು ನಡೆಸಲಾಯಿತು.
ರ‌್ಯಾಲಿಯಲ್ಲಿ ಭಾರತ ಮಾತೆ, ಭುವನೇಶ್ವರಿ ದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಮದರ್ ತೆರೇಸಾ ಒನಕೆ ಓಬವ್ವ, ಅಕ್ಕ ಮಹಾದೇವಿ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಲತಾ ಮಂಗೇಶ್ಕರ್ ಮಹನೀಯರ ವೇಷ ಧರಿಸಿ ಮಹಿಳಾ ದಿನಾಚರಣೆಯ ಗಮನ ಸೆಳೆಯಿತು. ಮಹಿಳೆಯರು ಸಾಂಪ್ರಾದಾಯಿಕ ಧಿರಿಸು ಇಳಕಲ್ ಸೀರೆಗಳನ್ನು ಧರಿಸಿ ಬೈಕ್ ಜಾಥಾದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ವೇತಾ, ಜಿಲ್ಲಾ ನಿರೂಪಣಾಧಿಕಾರಿ ಸುಭದ್ರ ದೇವಿ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಹಂಪಿ ಗ್ರಾಪಂ ಸದಸ್ಯೆ ರೂಪ, ಸಿಡಿಪಿಒ ಸಿಂಧೂ ಅಂಗಡಿ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಭೀಮರಾಜ.ಯು, ಹಿರಿಯ ಮೇಲ್ವಿಚಾರಕಿ ಅಂಬುಜ, ಮಿಷನ್ ಶಕ್ತಿ ಸಂಯೋಜಕ ಶಿವಣ್ಣ ನಾಯಕ್ ಸೇರಿದಂತೆ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್