ಬೆಂಗಳೂರು, 07 ಮಾರ್ಚ್ (ಹಿ.ಸ.) :
ಆ್ಯಂಕರ್ : ವೃಷಭಾವತಿ ವ್ಯಾಲಿ, ಹೆಚ್. ಎನ್ ವ್ಯಾಲಿ 2 ನೇ ಹಂತದ ಯೋಜನೆ, ಕೆರೆಗಳ ಆಧುನೀಕರಣ, ಅಣೆಕಟ್ಟು ಮತ್ತು ಪಿಕಪ್, ಏತ ನೀರಾವರಿ ಯೋಜನೆ, ನಿಷ್ಕ್ರೀಯ ಯೋಜನೆಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡಿ, ರಾಜ್ಯದ ಅಂತರ್ಜಲ ಹೆಚ್ಚಳಕ್ಕೆ 2000 ಕೋಟಿ ರೂಪಾಯಿಗಳ ಅನುದಾನದ ಮೂಲಕ ಒತ್ತು ನೀಡುವುದು. ಹಾಗೆಯೇ, ಕೋಲಾರ, ರಾಮನಗರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಸ್ಥಾಪನೆಗೆ ಅನುದಾನ ಒದಗಿಸುವ ಮೂಲಕ ವೈಜ್ಞಾನಿಕ ಮನೋಭಾವಕ್ಕೆ ಪುಷ್ಠಿ ನೀಡುವ ಮತ್ತು ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಧ್ವನಿಯಾಗುವಂತಹ ಕ್ರಾಂತಿಕಾರಿ ಆಯವ್ಯಯವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಪ್ರತಿಕ್ರಿಯಿಸಿದ್ದಾರೆ.
ಸಾರ್ವತ್ರಿಕ ಮೂಲ ಆಧಾಯ ಪರಿಕಲ್ಪನೆಯ ಮೂಲಕ ಕರ್ನಾಟಕ ಅಭಿವೃದ್ದಿಯ ಮಾದರಿಯನ್ನು ರೂಪಿಸಿರುವ ಖ್ಯಾತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು. ಪಂಚ ಗ್ಯಾರಂಟಿಗಳು ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸುವ ಮೂಲಕ ಕರ್ನಾಟಕ ಮಾದರಿ ಇಂದು ದೇಶವ್ಯಾಪಿಯಾಗಿದೆ. ಬಸವಣ್ಣವರ ಆಶಯದಂತೆ ನುಡಿದಂತೆ ನಡೆದ ಸರಕಾರ ನಮ್ಮದಾಗಿದೆ. ಈ ಬಾರಿ ಬಜೆಟ್ ನಲ್ಲಿ 52 ಸಾವಿರ ಕೋಟಿ ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ನೀಡಿದ್ದು, ಇಡೀ ದೇಶದಲ್ಲೆ ನಮ್ಮ ಸರಕಾರ ಮಾದರಿಯಾಗಿ ಹೊರಹೊಮ್ಮಿದೆ. ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ನುಡಿದಂತೆ 5 ಸಾವಿರ ಕೋಟಿಯ ಅನುದಾನವನ್ನು ಈ ಬಾರಿಯೂ ನೀಡಿದ್ದಾರೆ. ಯಾವುದೇ ಮಧ್ಯವರ್ತಿಗಳಿಲ್ಲದೆ 1 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ನೇರವಾಗಿ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ. ಪ್ರಾದೇಶಿಕ ಅಸಮಾನತೆಯ ನಿವಾರಣೆಯ ಜೊತೆಯಲ್ಲೇ, ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಲವರ್ಧನೆ, ಸುಗಮ ಸಾರಿಗೆ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ನಿಭಾಯಿಸಲು ಒತ್ತು ನೀಡುವ ಆಯವ್ಯವನ್ನು ಇಂದು ಮಂಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ನಡುವೆಯೂ ರಾಜ್ಯ ಅರ್ಥಿಕತೆ ಬೆಳವಣಿಗೆಯ ದರ ಶೇಕಡಾ 7.4 ರಷ್ಟು ದಾಖಲಾಗಿದೆ. ರಾಜ್ಯವು ಆರ್ಥಿಕ ಪ್ರಗತಿಯಲ್ಲಿ ಮುಂದುವರೆಯುತ್ತಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa