ಬೆಂಗಳೂರು, 07 ಮಾರ್ಚ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಹಾಗೂ ಮುಸ್ಲಿಮರ ಬಜೆಟ್ ಮಂಡಿಸಿದೆ. ಜೊತೆಗೆ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯಂತೆ 1.16 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊನೆಯ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಇಲ್ಲ. ಆದರೆ ತಿಪ್ಪೆ ಸಾರಿಸುವಂತೆ ಹಿಂದಿನ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ಹಳೆ ಮೈಸೂರು ಅಥವಾ ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗಳನ್ನು ಕೇಂದ್ರ ಸರ್ಕಾರದ ಅನುಮತಿ ಬಳಿಕ ಮುಂದುವರಿಸುತ್ತೇವೆ ಎಂದು ತಿಳಿಸಲಾಗಿದೆ. ಇದನ್ನು ಓದಿ ಪುಟಗಳನ್ನು ವ್ಯರ್ಥ ಮಾಡಲಾಗಿದೆ ಎಂದರು.
ಕರ್ನಾಟಕದ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಅತ್ಯಧಿಕ ಅಂದರೆ *1,16,170 ಕೋಟಿ* ರೂ. ಸಾಲ ಮಾಡಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾಖಲೆಯಾಗಿದೆ. ಒಟ್ಟು ಸಾಲದ ಪ್ರಮಾಣ *7,81,095 ಕೋಟಿ* ರೂ. ಗೆ ಏರಿದೆ. ಅಬಕಾರಿ ಇಲಾಖೆಗೆ 60,000 ಕೋಟಿ ರೂ. ಗುರಿ ನೀಡಿ, ಹೊಸ ಬಾರ್‌ಗಳನ್ನು ಘೋಷಿಸಲಾಗಿದೆ. ಇದನ್ನು ಕಾಂಗ್ರೆಸ್ ಶಾಸಕರ ಬಾಯಿ ಮುಚ್ಚಿಸಲು ಮಾಡಲಾಗಿದೆ. ಇದರಿಂದ 40,000 ಕೋಟಿ ರೂ. ಆದಾಯ ಬರಲಿದೆ. ಅನ್ನಭಾಗ್ಯ ಹೋಗಿ *ಕುಡುಕರ ಭಾಗ್ಯ* ಬಂದಿದೆ. 4-5 ಸಾವಿರ ಕೋಟಿ ರೂ. ಆದಾಯ ಹೆಚ್ಚಿಸಲು ಈ ಕ್ರಮ ವಹಿಸಲಾಗಿದೆ ಎಂದರು.
ಕಳೆದ ಬಜೆಟ್‌ನಲ್ಲೂ ಯಾವುದೇ ತೆರಿಗೆ ಘೋಷಣೆ ಮಾಡಿರಲಿಲ್ಲ. ಬಳಿಕ ತೆರಿಗೆಗಳನ್ನು ಹೆಚ್ಚಿಸಲಾಯಿತು. ಈ ಬಾರಿಯೂ ಬಜೆಟ್ ನಂತರ ತೆರಿಗೆ ಏರಿಕೆ ಮಾಡಲಾಗುತ್ತದೆ. ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡಿದಾಗ, ಅದು ಹೆಚ್ಚುವರಿಯಾಗಿತ್ತು. ಕಾಂಗ್ರೆಸ್ ಕೊರತೆ ಬಜೆಟ್ ಮಂಡಿಸಿದೆ. 193 ಪುಟಗಳಲ್ಲಿ ಹೊಸತನವೇ ಇಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa