ರಾಯಚೂರು, 07 ಮಾರ್ಚ್ (ಹಿ.ಸ.) :
ಆ್ಯಂಕರ್ : ಜಾಗತಿಕ ಮಟ್ಟದಲ್ಲಿ ಸವಾಲು ಒಡ್ಡುವ ರೀತಿಯಲ್ಲಿ ನಮ್ಮ ಕರುನಾಡಿನ ಯುವ ಸಮೂಹವನ್ನು ತಯಾರು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೌಶಲ್ಯಾಭಿವೃದ್ಧಿ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಹದಿನಾರನೇ ಬಜೆಟ್ ಮಂಡಿಸಿದ ನಂತರ ಸಚಿವರು ಅಭಿಪ್ರಾಯ ತಿಳಿಸಿದ್ದಾರೆ.
ನಿರುದ್ಯೋಗಿಗಳಾಗಿರುವ ಪದವೀಧರರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲು ನಮ್ಮ ಸರ್ಕಾರವು ʻಯುವನಿಧಿʼ ಯೋಜನೆ ಸುಮಾರು 2.58 ಲಕ್ಷ ಯುವಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 286 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನಿರುದ್ಯೋಗ ಭತ್ಯೆ ನೀಡುವುದರೊಂದಿಗೆ ಈ ಯುವಕರಿಗೆ ಇಂಡಸ್ಟ್ರಿ ಲಿಂಕೇಜ್ ಅಡಿ ಕೌಶಲ್ಯ ತರಬೇತಿ ನೀಡಲಾಗುವುದು. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಪ್ರಸ್ತುತ, ರಾಜ್ಯದ ಯುವಕರ ಉದ್ಯೋಗಾರ್ಹತೆ ಮತ್ತು ಉದ್ಯಮಶೀಲತೆಯನ್ನು ಇನ್ನಷ್ಟು ಉತ್ತೇಜಿಸಲು ಯೋಜನೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಸಿಎಂಕೆಕೆವೈ-2.0 ಅನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನವನ್ನು ಒದಗಿಸಲು ʻನನ್ನ ವೃತ್ತಿ, ನನ್ನ ಆಯ್ಕೆʼ ಕಾರ್ಯಕ್ರಮದಡಿ ಸರ್ಕಾರಿ ಶಾಲಾ/ ಕಾಲೇಜುಗಳಲ್ಲಿನ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ವಿಶ್ವ ಕೌಶಲ್ಯ ಸ್ಪರ್ಧೆಯ ಪೂರ್ವಸಿದ್ಧತೆಗಾಗಿ ಆಯೋಜಿಸಲಾಗುವ ರಾಷ್ಟ್ರೀಯ ಮಟ್ಟದ ಇಂಡಿಯಾ ಸ್ಕಿಲ್ 2026 ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಅಳಿವಿನಂಚಿನಲ್ಲಿರುವ ಪಾರಂಪರಿಕ ಮತ್ತು ಪ್ರಾದೇಶಿಕ ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು 2,000 ಅಭ್ಯರ್ಥಿಗಳಿಗೆ ಅಗತ್ಯವಿರುವ ಟೂಲ್ ಕಿಟ್‍ಗಳೊಂದಿಗೆ ಅಲ್ಪಾವಧಿ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಲಂಬಾಣಿ ಜನಾಂಗದ ಕಸೂತಿ ಕಲೆಯ ಬಗ್ಗೆ ತರಬೇತಿಯನ್ನು 1,000 ಅಭ್ಯರ್ಥಿಗಳಿಗೆ ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳಲ್ಲಿನ ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ʻಗೃಹಲಕ್ಷ್ಮಿʼಯೋಜನೆಯ ಯಜಮಾನಿಯರನ್ನು ಸ್ವಸಹಾಯ ಗುಂಪುಗಳ ಸದಸ್ಯರುಗಳನ್ನಾಗಿಸಿ ರಾಜ್ಯಮಟ್ಟದ ʻಅಕ್ಕ ಕೋ-ಆಪರೇಟಿಟ್ ಸೊಸೈಟಿʼ ವ್ಯಾಪ್ತಿಗೆ ತರಲಾಗುವುದು. ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳಾ ಸ್ವ-ಸಹಾಯ ಸಂಘಗಳಿಂದ ಆಯ್ದ 50 ಸ್ಥಳಗಳಲ್ಲಿ ಶಿಶು ಪಾಲನೆಗಾಗಿ ʻವಾತ್ಸಲ್ಯ ಕೇಂದ್ರʼಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಇಂದಿರಾ ಕ್ಯಾಂಟೀನ್‍ಗಳ ನಿರ್ವಹಣೆಯನ್ನು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಸ್ವ-ಸಹಾಯ ಸಂಘಗಳ ಮಹಿಳೆಯರ ಮೂಲಕ ನಿರ್ವಹಿಸುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ 10 ನಗರ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಬಜೆಟ್‍ನಲ್ಲಿ ಘೋಷಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಅಂತಾರಾಷ್ಟ್ರೀಯ ಉದ್ಯೋಗ ಮೇಳ: ರಾಜ್ಯದಲ್ಲಿನ ನಸಿರ್ಂಗ್ ವಿದ್ಯಾರ್ಥಿಗಳಿಗೆ ಜರ್ಮನ್, ಇಟಾಲಿಯನ್, ಸ್ಪ್ಯಾನಿμï ಹಾಗೂ ಇತರೆ ವಿದೇಶಿ ತರಬೇತಿ ನೀಡಲಾಗುವುದು.
ಇದರಿಂದ ನಸಿ0ರ್ಗ್ ವಿದ್ಯಾರ್ಥಿಗಳಿಗೆ ವಿದೇಶದಲ್ಲಿಯೂ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ. ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮೂಲಕ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಘೋಷಿಸಿರುವ ಅತ್ಯಂತ ಗಮನಾರ್ಹ ಯೋಜನೆಗಳಲ್ಲಿ ಒಂದಾಗಿದೆ ಎಂದು ಸಚಿವರು ತಿಳಿಸಿದರು.
ಯುವ ಸಬಲೀಕರಣ ಹಾಗೂ ಯುವ ಸಮುದಾಯವನ್ನು ಜಾಗತಿಕ ಮಟ್ಟಕ್ಕೆ ಸನ್ನದ್ಧು ಮಾಡಲು ನಮ್ಮ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿಯೇ ಬಜೆಟ್ ನಲ್ಲಿ ಕೌಶಲ್ಯಾಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್