ಕೋಲಾರ, ಮಾರ್ಚ್ 0೬ (ಹಿ.ಸ.):
ಆ್ಯಂಕರ್ : ಗರ್ಭಿಣಿಯರ ಸಾವು ತಡೆಯಲು ವೈದ್ಯಾಧಿಕಾರಿಗಳ ತಂಡ ರಚನೆ ಮಾಡಿದ್ದು ಜಿಲ್ಲೆಯಲ್ಲಿ ತಕ್ಷಣ ಆರೈಕೆ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ತಿಳಿಸಿದರು.
ನಗರ ಹೊರವಲಯದ ತೇರಳ್ಳಿಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಮಾಧ್ಯಮ ಮಿತ್ರರಿಗೆ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮದ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂತಹ ಕಠಿಣ ಸಂದರ್ಭದಲ್ಲೂ ಗರ್ಭಿಣಿಯರಿಗೆ ಉತ್ತಮ ಆರೈಕೆ ಹಾಗೂ ಚಿಕಿತ್ಸೆ ನೀಡುವ ದೃಷ್ಟಿಯಿಂದ ಆರು ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಸ್ತ್ರೀ ತಜ್ಞರು ಒಟ್ಟಿಗೆ ತಂಡವನ್ನು ರಚಿಸಿ ಚಿಕಿತ್ಸೆ ನೀಡುವ ಕರ್ತವ್ಯವನ್ನು ಮಾಡುತ್ತಿದ್ದೇವೆ ಎಂದರು.
ಯಾವುದೇ ಸಾವು ನೋವು ಜರುಗದಂತೆ, ಗರ್ಭಿಣಿಯರು ಮತ್ತು ಹೆರಿಗೆ ನಂತರ ಮಕ್ಕಳ ಆರೈಕೆಯು ಸಹ ಮಾಡಲು ಎಲ್ಲಾ ರೀತಿಯ ತಂತ್ರಜ್ಞಾನದ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲೂ ಉತ್ತಮ ಸೇವೆಯೊಂದಿಗೆ ಔಷಧಿಗಳು ಸಹ ದೊರಕುವ ರೀತಿ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ಮನೆ ಮನೆಗೆ ಗೃಹ ಆರೋಗ್ಯ ಕಾರ್ಯಕ್ರಮ ಕುರಿತು ಮಾತನಾಡಿ, ೩೦ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮನೆ ಮನೆಗೆ ತೆರಳಿ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಮತ್ತು ಪರೀಕ್ಷೆ ಮಾಡಲಾಗುತ್ತದೆ. ಯೋಜನೆಯಡಿಯಲ್ಲಿ ಎಲ್ಲಾ ಸಾರ್ವಜನಿಕರ ಆರೋಗ್ಯ ಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕ ವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿ ಹೊಂದಿದೆ ಎಂದರು.
ಕೋಲಾರದಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಜನತೆಯ ಮನೆ ಮನೆ ಬಾಗಿಲಿಗೆ ಆರೋಗ್ಯ ಸೇವೆ ಸಲ್ಲಿಸುವುದು ರಾಜ್ಯ ಸರ್ಕಾರದ ಯೋಜನೆಯಾಗಿದೆ. ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತರನ್ನು ಒಳಗೊಂಡ ೧೫೦ ತಂಡಗಳು ವಾರದಲ್ಲಿ ೩ ದಿನ ಪ್ರತಿ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿ ಉಚಿತ ಔಷಧಿ ತಲುಪಿಸಲಾಗುತ್ತದೆ. ಈಗಾಗಲೇ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರು.
ರಕ್ತದೊತ್ತಡ ಮಧುಮೇಹ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಗರ್ಭ ಕೊರಳಿನ ಕ್ಯಾನ್ಸರ್ ಹೃದಯ ಸಂಬಂಧಿ ಕಾಯಿಲೆಗಳು ನಿದ್ರಾಹೀನತೆ ಈ ಕಾಯಿಲೆಗಳ ಬಗ್ಗೆ ತಪಾಸಣೆ ಮಾಡಲಿದ್ದಾರೆ. ಕ್ಯಾನ್ಸರ್ ಚಿಹ್ನೆ ಲಕ್ಷಣಗಳು ಕಂಡುಬಂದಲ್ಲಿ ತಜ್ಞ ವೈದ್ಯರ ಮೂಲಕ ರೋಗ ನಿರ್ಣಯ ಖಾತ್ರಿಪಡಿಸಿ ಮುಂದಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕೊಪ್ಪಳ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಉಲ್ಬಣಗೊಂಡಿದ್ದು ಜಿಲ್ಲೆಯ ಜನತೆ ಭಯಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯಲ್ಲಿ ಹಕ್ಕಿಜ್ವರ ಹರಡದಂತೆ ಎಚ್ಚರ ವಹಿಸಲಾಗಿದೆ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸಿದರೆ ಯಾವುದೇ ಸೋಂಕು ಹರಡುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಡಾ.ಎನ್.ಜಿ.ನಾರಾಯಣಸ್ವಾಮಿ ಮಾತನಾಡಿ ಕುಷ್ಟರೋಗ, ಮೆದುಳು ಜ್ವರ, ಮಾನಸಿಕ ಕಾಯಿಲೆ, ಡೆಂಗೀ, ಚಿಕನ್ ಗುನ್ಯಾ, ಮಲೇರಿಯಾ ಕಾಯಿಲೆಗಳ ನಿಯಂತ್ರಣ ಹಾಗೂ ಜಾಗರೂಕತೆ ಮತ್ತು ಹವಾಮಾನ ವೈಪರಿತ್ಯ ಮತ್ತು ಮಾನವನ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಡಾ.ಚಾರಣಿ, ಡಾ. ಚಂದನ್, ಡಾ.ಪ್ರಸನ್ನಕುಮಾರ್ ಡಾ.ರಾಜೇಶ್, ಆರೋಗ್ಯ ಸುರಕ್ಷಾಧಿಕಾರಿಗಳು, ಶಿಕ್ಷಣಾಧಿಕಾರಿಗಳು, ಅನುಷ್ಠಾನಾಧಿಕಾರಿಗಳು, ವಾರ್ತಾ ಇಲಾಖೆ ಅಧಿಕಾರಿ ಮಂಜೇಶ್, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪತ್ರಕರ್ತರು ಭಾಗವಹಿಸಿದ್ದರು.
ಚಿತ್ರ: ಕೋಲಾರ ತಾಲ್ಲೂಕಿನ ನಗರ ಹೊರವಲಯದ ತೇರಳ್ಳಿಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಮಾಧ್ಯಮ ಮಿತ್ರರಿಗೆ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮದ ಕಾರ್ಯಗಾರವನ್ನು ಡಿಹೆಚ್‌ಓ ಡಾ.ಜಿ.ಶ್ರೀನಿವಾಸ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್