ಬೆಂಗಳೂರು, 06 ಮಾರ್ಚ್ (ಹಿ.ಸ.) :
ಆ್ಯಂಕರ್ : 70 ವರ್ಷ ಮೇಲ್ಪಟ್ಟವರಿಗೆ ವಯೋ ವಂದನ ಯೋಜನೆ ಅನುಷ್ಠಾನಕ್ಕೆ 68 ಕೋಟಿ ಅಗತ್ಯತೆ ಇದ್ದು, 60% ಹಣಕಾಸನ್ನು ಕೇಂದ್ರ ಸರ್ಕಾರ ಭರಿಸಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅನುದಾನ ಹಂಚಿಕೆ ಬಗ್ಗೆ ಸ್ಪಷ್ಟನೆ ಕೇಳಿದ್ದೇವೆ. ಆದರೆ, ಈವರೆಗೂ ಕೇಂದ್ರ ಸರ್ಕಾರ ಅನುದಾನ ಹಂಚಿಕೆ ಕುರಿತು ಉತ್ತರಿಸಿಲ್ಲ. ಅನುದಾನದ ಕುರಿತು ಸ್ಪಷ್ಟನೆ ಬಂದ ಬಳಿಕ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸದನದಲ್ಲಿ ವಯೋ ವಂದನ ಯೋಜನೆ ಜಾರಿ ಕುರಿತು ಪ್ರಶ್ನೆ ಕೇಳಿದ ಶಾಸಕ ವೇದವ್ಯಾಸ್ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ರಾಜ್ಯದಲ್ಲಿ 1 ಕೋಟಿ 12 ಲಕ್ಷ ಜನರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಬರುವ ಕಾರಣ ಬಹುತೇಕ 70 ವರ್ಷ ಮೇಲ್ಪಟ್ಟವರು ಯೋಜನೆ ಅಡಿ ಫಲಾನುಭವಿಗಳಾಗಿದ್ದಾರೆ.
ಕೇಂದ್ರದ ನೀತಿಗಳ ಪ್ರಕಾರ ಆಯುಷ್ಮಾನ್ ಭಾರತ್ ಯೋಜನೆಗೆ ಕೇಂದ್ರ ಸರ್ಕಾರ 60% ಹಾಗೂ ರಾಜ್ಯ ಸರ್ಕಾರ 40% ರಷ್ಟು ಅನುದಾನ ಒದಗಿಸಬೇಕು. ಆದರೆ ಪ್ರಸ್ತುತ ಆಯುಷ್ಮಾನ್ ಭಾರತ್ ಯೋಜನೆಗೆ ರಾಜ್ಯ ಸರ್ಕಾರವೇ 75% ಹಣಕಾಸಿನ ನೆರವು ಒದಗಿಸುತ್ತಿದೆ. ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸಾ ವೆಚ್ಚಗಳನ್ನು ಪರಿಷ್ಕರಿಸಿದರೆ ಯೋಜನೆಯ 90% ರಷ್ಟು ಅನುದಾನವನ್ನು ರಾಜ್ಯ ಸರ್ಕಾರವೇ ಭರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa