ರಾಯಚೂರು, 06 ಮಾರ್ಚ್ (ಹಿ.ಸ.) :
ಆ್ಯಂಕರ್ : ರಾಯಚೂರಿಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ನೀಡಲೇಬೇಕು. ರಾಯಚೂರ ಜಿಲ್ಲೆಯ ಸಮಗ್ರ ಜನರ ಪರವಾಗಿ ತಾವು ಈ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ರಾಯಚೂರು ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಅಯ್ಯಪ್ಪಯ್ಯ ಹುಡಾ ಹೇಳಿದ್ದಾರೆ.
ಗುರುವಾರ ದಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ರಾಯಚೂರು ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾಲ ಕೂಡಿ ಬರುತ್ತಿರುವುದು ಸಂತಸದ ವಿಷಯವಾಗಿದೆ. ಅದೇ ರೀತಿ ಹತ್ತಿ ಮಾರುಕಟ್ಟೆಗೆ ಹೆಸರುವಾಸಿಯಾಗಿರುವ ರಾಯಚೂರಿಗೆ ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಮಂಜೂರು ಮಾಡಬೇಕಿದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಸಾಕಷ್ಟು ಹಿಂದುಳಿದಿರುವ ರಾಯಚೂರಿಗೆ ಏಮ್ಸ್ ಮಂಜೂರಿಗಾಗಿ ಸಾವಿರ ದಿನಗಳಕ್ಕೂ ಹೆಚ್ಚು ದಿನಗಳ ಕಾಲ ಹೋರಾಟ ನಡೆಯುತ್ತಿದೆ ಎಂದರು.
ಕನ್ನಡಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದ್ದು ಅದನ್ನು ನಾವೆಲ್ಲಾ ಉಳಿಸಿ, ಬೆಳೆಸಿಕೊಂಡು ಹೋಗುವುದರ ಜೊತೆಗೆ ಇಲ್ಲಿನ ನೆಲ, ಜಲ ಕುರಿತು ಸ್ವಾಭಿಮಾನ ಹೊಂದಿ ಕನ್ನಡದ ಅಸ್ಮ್ಥಿತೆಯನ್ನು ಕಾಪಾಡಿಕೊಂಡು ಹೋಗಬೇಕಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನೆಲ-ಜಲದ ಬಗ್ಗೆ ಇರುವ ಕಾರ್ಯಚಟುವಟಿಕೆಗಳ ಬಗ್ಗೆ ಅರಿಯೋಣ ಎಂದರು.
ರಾಯಚೂರು ಬಿಸಿಲ ನಾಡಾಗಿದ್ದು, ಇಲ್ಲಿನ ಸಾಹಿತ್ಯಕ್ಕೆ ಆನೇಕ ಮಹನೀಯರು ಕೊಡುಗೆ ನೀಡಿದ್ದಾರೆ. ಪ್ರೇಮಾಂತಃಕರಣಕ್ಕೆ ರಾಯಚೂರು ಜನರು ಹೆಸರುವಾಸಿಯಾಗಿದ್ದಾರೆ. ಆದರೆ ಇಲ್ಲಿನ ಜನರಿಗೆ ಸುಂದರ ರಸ್ತೆ, ಶುದ್ದ ಕುಡಿಯುವ ನೀರು, ಸ್ವಚ್ಛ ಪರಿಸರ ನಿರ್ಮಾಣ ಮಾಡಬೇಕು ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್