ಕೋಲಾರ, ಮಾರ್ಚ್.೬ (ಹಿ.ಸ.) :
ಆ್ಯಂಕರ್ : ರಾಜಕೀಯ ದ್ವೇಷದಿಂದ ಡಿಸಿಸಿ ಬ್ಯಾಂಕ್ ಚುನಾವಣೆ ವಿಳಂಭವಾಗುತ್ತಿದ್ದು, ಮಹಿಳೆಯರು, ರೈತರು ಬಡ್ಡಿರಹಿತ ಸಾಲದಿಂದ ವಂಚಿತರಾಗುತ್ತಿದ್ದಾರೆ, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಉತ್ತರ ನೀಡಬೇಕು ಎಂದು ತಾಲೂಕಿನ ಕಡಗಟ್ಟೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂಘದ ಅಧ್ಯಕ್ಷ ಕೆ.ವಿ.ದಯಾನಂದ ಹೇಳಿದರು.
ತಾಲೂಕಿನ ಕಡಗಟ್ಟೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ೧೬ ಮಹಿಳಾ ಸ್ವಸಹಾಯ ಸಂಘಗಳಿಗೆ ತಲಾ ೫ ಲಕ್ಷ ರೂ. ನವೀಕೃತ ಸಾಲದ ಚೆಕ್ ವಿತರಿಸಿ ಮಾತನಾಡಿದರು. ಮಹಿಳಾ ಸದಸ್ಯರು ಪ್ರಾಮಾಣಿಕವಾಗಿ ಮರುಪಾವತಿ ಮಾಡಿರುವ ಹಿನ್ನಲೆಯಲ್ಲಿ ಸೋಸೈಟಿಯು ಸ್ವಂತ ಬಂಡವಾಳದಿಂದ ೧೬ ಸಂಕ್ಕೆ ೮೦ ಲಕ್ಷ ರೂ. ಸಾಲ ನೀಡಲಾಗುತ್ತಿದೆ ಎಂದರು. ಕಡಗಟ್ಟೂರು ಸೊಸೈಟಿಯು ರೈತರಿಗೆ, ಮಹಿಳೆಯರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದೆ. ಇದರ ಗ್ಗೆ ನಂಬಿಕೆ ಉಳಿಸಿಕೊಂಡಿರುವವರು ಸ್ವಯಂ ಪ್ರೇರಿತರಾಗಿ ಠೇವಣಿ ಇಟ್ಟಿದ್ದಾರೆ. ಇದರಿಂದ ಸರ್ಕಾರ, ಯಾವುದೇ ಬ್ಯಾಂಕ್ ಮೇಲೆ ಅವಲಂಭನೆಯಾಗಿಲ್ಲ ಎಂದರು.
ಮಹಿಳಾ ಸಂಘಗಳು ಎರಡೂ ಜಿಲ್ಲೆಯಲ್ಲಿ ಸೇರಿ ೨೬,೦೦೦ ಇದ್ದವು, ನೀಡಲಾಗಿರುವ ಸಾಲ ವಸೂಲಿಯಾಗುತ್ತಿಲ್ಲ, ಇದರಿಂದಾಗಿ ಹೊಸದಾಗಿ ಸಾಲ ನೀಡಲು ತೊಂದರೆಯಾಗುತ್ತಿದೆ. ಇದಕ್ಕೆಲ್ಲ ಬ್ಯಾಂಕಿನ ಕೆಲ ಅಧಿಕಾರಿಗಳು ಹಾಗೂ ಕೆಲ ಸೊಸೈಟಿ ಸಿಬ್ಬಂದಿ ನೇರ ಕಾರಣರಾಗಿದ್ದಾರೆ ಎಂದು ದೂರಿದರು.
ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಅಧಿಕಾರದಲ್ಲಿ ಇದ್ದಾಗ ಶೇ.೯೦ರಷ್ಟು ಸಾಲ ವಸೂಲಿ ಆಗುತ್ತಿತ್ತು, ಆದರೆ ಈಗ ವಸೂಲಿಯು ಹಳಿ ತಪ್ಪಿದೆ, ಇದಕ್ಕೆಲ್ಲ ಅಧಿಕಾರಿಗಳು ಕಾರಣರಾಗಿದ್ದಾರೆ. ಬ್ಯಾಂಕಿನ ಚುನಾವಣೆಯಲ್ಲಿ ಸಕಾಲಕ್ಕೆ ನಡೆಸಿದ್ದರೆ ಈ ಸಮಸ್ಯೆ ಉದ್ಬವಿಸುತ್ತಿರಲಿಲ್ಲ ಎಂದು ತಿಳಿಸಿದರು.
ಚುನಾವಣೆ ನಡೆಸಲು ರಾಜಕೀಯ ದ್ವೇಷ ಅಸೂಯೆ ಕಾರಣವಾಗಿದೆ. ಸೊಸೈಟಿಗಳಲ್ಲಿ ಭ್ರಷ್ಟಾಚಾರ ನಡೆಸಲು ಕಾರಣರಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮಕೈಗೊಂಡರೆ ವ್ಯವಸ್ಥೆಯನ್ನು ಸರಿಪಡಿಸಬಹುದು. ಆದರೆ ರಾಜಕೀಯ ಮೇಲಾಟಗಳಿಗೆ ಬ್ಯಾಂಕ್ ಬಲಿಯಾಗುತ್ತಿದೆ ಎಂದು ಕಿಡಿಕಾರಿದರು.
ಬ್ಯಾಂಕಿನಲ್ಲಿ ತಪ್ಪು ಮಾಡಿ ಸಿಕ್ಕಾಕಿಕೊಂಡು ಅಮಾನತ್ತು ಆಗಿರುವ ಅಧಿಕಾರಿಗಳನ್ನು ಅದೇ ಜಾಗದಲ್ಲಿ ಮುಂದುವರೆಸಿರುವುದು ತಪ್ಪು, ಅವರು ಮತ್ತೆ ತಪ್ಪು ಮಾಡುವ ಸಾಧ್ಯತೆ ಇರುತ್ತದೆ. ಅವರನ್ನು ಬೇರೆ ಬೇರೆ ಶಾಖೆಗಳಿಗೆ ವರ್ಗಾವಣೆ ಮಾಡಬೇಕು. ತಪ್ಪು ಮಾಡಿರುವವರಿಗೆ ಪೊಲೀಸ್ ರುಚಿ ತೋರಿಸಬೇಕು ಎಂದರು.
ರಾಜ್ಯ ಹಾಗೂ ನಬಾರ್ಡ್ ಬ್ಯಾಂಕಿನಿಂದ ಬರುವ ಇಂಟ್ರಸ್ಟ್ ರಿಸಿವಲ್ ಹೆಡ್ ಇಟ್ಟುಕೊಂಡು ಅಜೆಸ್ಟ್ ಮೆಂಟ್ ಮಾಡಿರುವುದು ಹಗರಣಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗದು. ಹೆಡ್ ವಹಿವಾಟು ನಡೆಸುವುದನ್ನು ನಿಲ್ಲಿಸಬೇಕು. ಸಿಬ್ಬಂದಿಯ ಪ್ರಾಮಾಣಿಕ ಹಾಗೂ ರೈತರ, ಮಹಿಳೆಯರ ಸಹಕಾರದಿಂದ ಈ ಭಾಗಕ್ಕೆ ಮೈಕ್ರೋ ಫೈನಾನ್ಸ್‌ಗಳು ನುಸುಳಲು ಬಿಟ್ಟಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸೊಸೈಟಿ ಉಪಾಧ್ಯಕ್ಷ ಮಂಜುನಾಥ್,ನಿರ್ದೇಶಕರಾದ ರಮೇಶ್, ಕುರಗಲ್ ನಾರಾಯಣಮ್ಮ, ಸುಳದೇನಹಳ್ಳಿ ನಾರಾಯಣಮ್ಮ, ಮುನಿಕೃಷ್ಣ, ಎಂ.ಡೇವಿಡ್, ಕುಮಾರಚಾರಿ, ಎಂ.ಬೈಯಣ್ಣ, ಎಂ.ವಿ.ಮಂಜುನಾಥ, ಬಿ.ಎಂ.ರಾಮೇಗೌಡ, ಸಿ.ಡಿ.ರಾಮಚಂದ್ರ, ಸಿಇಒ ಮುನೀಶ್ವರಪ್ಪ, ಸಿಂಧೂ ಉಪಸ್ಥಿತರಿದ್ದರು.
ಚಿತ್ರ: ಕೋಲಾರ ತಾಲೂಕಿನ ಕಡಗಟ್ಟೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂಘದ ಅಧ್ಯಕ್ಷ ಕೆ.ವಿ.ದಯಾನಂದ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ೧೬ ಮಹಿಳಾ ಸ್ವಸಹಾಯ ಸಂಘಗಳಿಗೆ ತಲಾ ೫ ಲಕ್ಷ ರೂ. ನವೀಕೃತ ಸಾಲದ ಚೆಕ್ ವಿತರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್