ಗದಗ, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ವಹಿಸಬೇಕು. ಗ್ರಾಮಗಳಲ್ಲಿಯ ಕುಡಿಯುವ ನೀರಿನ ಮೂಲಗಳ ಪರೀಕ್ಷೆ ಹಾಗೂ ಸರಬರಾಜುವಿನ ಬಗ್ಗೆ ನಿರಂತರವಾಗಿ ಕ್ರಮವಹಿಸಬೇಕು. ಸಾಂಕ್ರಾಮಿಕ ರೋಗಗಳಾದ ಕರಳುಬೇನೆ, ಕಾಲರಾ, ವಿಷಮ ಶೀತಜ್ವರ, ಕಾಮಾಲೆ, ಕೆಎಫ್ ಡಿ, ಹಕ್ಕಿಜ್ವರ, ನಾಯಿಕಡಿತ ಹಾಗೂ ಹಾವು ಕಡಿತ ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತೆ ವಹಿಸಬೇಕು ಎಂದರು.
ಕುಡಿಯುವ ನೀರಿನ ಪೈಪಲೈನ್‌ಗಳಲ್ಲಿ ಕಲುಷಿತ ನೀರು ಸೇರಿಕೊಳ್ಳದ ಹಾಗೆ ಕ್ರಮವಹಿಸಲು ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಬೇಕು. ಎಲ್ಲ ಓಎಚ್‌ಟಿಗಳನ್ನು ನಿಯಮಿತವಾಗಿ ಸರಿಯಾಗಿ ಸ್ವಚ್ಛಗೊಳಿಸಲು ಕ್ರಮ ವಹಿಸಬೇಕು. ಓಎಚ್‌ಟಿಗಳಲ್ಲಿ ಶೇಖರಿಸಿದ ನೀರನ್ನು ಕ್ರಮಬದ್ಧವಾಗಿ ಕ್ಲೋರಿನೇಷನ್ ಮಾಡಿ ಸರಬರಾಜು ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೆಎಫ್‌ಡಿ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಸಹಕಾರ ನೀಡಬೇಕು. ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ಜಿಲ್ಲೆಯಲ್ಲಿ ಸುಮಾರು 1000ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಲಸಿಕೆಯನ್ನು ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಕಾಯ್ದಿರಿಸಿಡಲು ನಿರ್ದೇಶಿಸಿದರು. ನಾಯಿ ಕಡಿತ ಪ್ರಕರಣಗಳನ್ನು ಹತೋಟಿಯಲ್ಲಿಡಲು ಎಬಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಹಾಗೂ ಒಂದು ತಂಡವನ್ನು ರಚಿಸಿ ಮಾಂಸದ ಅಂಗಡಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ತಿಳಿಸುವಂತೆ ಪಶುಸಂಗೋಪನಾ ಇಲಾಖೆಗೆ ಜಿಲ್ಲಾಧಿಕಾರಿ ಸಿ ಎನ್. ಶ್ರೀಧರ್ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಮಾತನಾಡಿ, ಸೊಳ್ಳೆಗಳಿಂದ ಹರಡುಬಹುದಾದ ರೋಗಗಳಾದ ಮಲೇರಿಯಾ, ಡೆಂಘೀ, ಚಿಕುನ್‌ಗುನ್ಯಾ ಹಾಗೂ ಮೆದುಳಜ್ವರದ ಪ್ರಕರಣಗಳನ್ನು ತಡೆಗಟ್ಟಲು ಚರಂಡಿ, ಗಟಾರಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತ ನೀರಿನಲ್ಲಿ ಸೊಳ್ಳೆ ಪ್ರಮಾಣ ಹೆಚ್ಚಾಗದಂತೆ ಲಾರ್ವಾ ಸಮೀಕ್ಷೆಯನ್ನು ತೀವ್ರಗೊಳಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ್ ಅವರು ಮಾತನಾಡಿ ಜಿಲ್ಲೆಯಲ್ಲಿ 2024 ರಲ್ಲಿ 410 -ಡೆಂಘೀ ಪ್ರಕರಣಗಳು ಹಾಗೂ 14-ಚಿಕುನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ ಎಂದರು. ಗದಗ ಜಿಲ್ಲೆಯು ಕೂಡ ಕೆಎಫ್‌ಡಿ ಬಾಧಿತ ಎಂಡಮಿಕ್ ಜಿಲ್ಲೆಯಾಗಿದ್ದು, ಕೆಎಫ್‌ಡಿ ವೈರಸ್‌ನಿಂದ ಸೋಂಕಿತಗೊಂಡ ಉಣ್ಣೆಯು ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದೆ. ಈ ಖಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಜಿಲ್ಲೆಯಿಂದ ಈಗಾಗಲೇ 11 ರಕ್ತದ ಮಾದರಿಗಳನ್ನು ಹಾಗೂ 16-ಟಿಕ್‌ಪೂಲ್ ಮಾದರಿಗಳನ್ನು ಕೆಎಫ್‌ಡಿ ವೈರಸ್ ಪತ್ತೆಗಾಗಿ ವಿಡಿಎಲ್ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲ ರಕ್ತದ ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದ್ದು, ಟಿಕ್‌ಪೂಲ್ ಮಾದರಿಗಳ ಫಲಿತಾಂಶ ನಿರೀಕ್ಷಣೆಯಲ್ಲಿವೆ. ಜಿಲ್ಲೆಯಲ್ಲಿ ಯಾವುದೇ ಮಂಗಗಳ ಸಾವಿನ ವರದಿಯಾಗಿರುವುದಿಲ್ಲ ಹಾಗೂ ಕೆಎಫ್‌ಡಿ ನಿಯಂತ್ರಣದಲ್ಲಿ ವಿವಿಧ ಇಲಾಖೆಗಳ ಪಾತ್ರವನ್ನು ಜಿಲ್ಲಾ ಸಮೀಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ 2024 ರಲ್ಲಿ ಒಟ್ಟು 206 ಹಾವು ಕಡಿತದ ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳಿಗೆ ಸಂಬಂಧಿಸಿದಂತೆ ಲಸಿಕೆಗಳನ್ನು ಅಗತ್ಯಕ್ಕನುಗುಣವಾಗಿ ಆರೋಗ್ಯ ಸಂಸ್ಥೆಗಳಲ್ಲಿ ಕಾಯ್ದಿರಿಸಿಡಲು ನಿರ್ದೇಶಿಸಿದರು. ಹಾವು ಕಡಿತದ ಹೊಸದಾಗಿ ನಿರ್ದೇಶನಾಲಯದ ಮಾರ್ಗಸೂಚಿಯನ್ನು ಅನುಸರಿಸಿ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ತರಬೇತಿಯನ್ನು ನೀಡಲು ಹಾಗೂ ರಾಷ್ಟ್ರೀಯ ಅಯೋಡಿನ್ ಕೊರತೆಯ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಅಯೋಡಿನ್ ಮಹತ್ವವನ್ನು ತಿಳಿಸುವ ಆರೋಗ್ಯ ಶಿಕ್ಷಣವನ್ನು ನೀಡಲು ಸೂಚಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Lalita MP