ರಾಯಚೂರು, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ರಾಯಚೂರು ಬೆಳವಣಿಗೆ ಕೇಂದ್ರದ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 167ರಿಂದ ಮೊದಲ್ಗೊಂಡು 1500 ಮೀಟರವರೆಗೆ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು 2024ರ ಆಗಸ್ಟ್ 22ರಂದು ಕಾರ್ಯಾದೇಶ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ದಿ ಸಚಿವರಾದ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಎ ವಸಂತಕುಮಾರ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ರಾಯಚೂರ ಜಿಲ್ಲೆಯಲ್ಲಿ ಕೆಐಎಡಿಬಿಯಿಂದ ಅಭಿವೃದ್ಧಿಪಡಿಸಲಾದ ರಾಯಚೂರಿನ 155.88 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ರದೇಶದಲ್ಲಿ, ದೇವಸಗೂರನ 214.86 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ರದೇಶದಲ್ಲಿ, ರಾಯಚೂರಿನ ಬೆಳವಣಿಗೆ ಕೇಂದ್ರದ 1745.31 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ರದೇಶದಲ್ಲಿ, ಯರಮರಸ್‍ನ 41.63 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ರದೇಶದಲ್ಲಿ ಮತ್ತು ಮಾನ್ವಿಯ 59.7 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 2801-07 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂ ಸ್ವಾಧೀನವಾದ ಈ ಜಮೀನನ್ನು ಮಂಡಳಿಯ ವಶಕ್ಕೆ ಪಡೆಯಲಾಗಿದೆ. ಇವೆಲ್ಲವೂ ಹಳೆಯ ಕೈಗಾರಿಕಾ ಪ್ರದೇಶಗಳಾಗಿದ್ದು ಇಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ.
ಈ ಪೈಕಿ ರಾಯಚೂರ ಬೆಳವಣಿಗೆ ಕೇಂದ್ರದ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 167ರಿಂದ ಮೊದಲಗೊಂಡು 1500 ಮೀಟರವರೆಗೆ ಮೇಲ್ದರ್ಜೆಗೇರಿಸಲು ಕಾರ್ಯಾದೇಶ ನೀಡಲಾಗಿದ್ದು, ಉಳಿದಂತೆ ಕಳೆದ 5 ವರ್ಷಗಳಲ್ಲಿ ಇತರೆ ಕೈಗಾರಿಕಾ ಪ್ರದೇಶಗಳಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಂಡಿರುವುದಿಲ್ಲ ಎಂದು ಸಚಿವರಾದ ಎಂ.ಬಿ.ಪಾಟೀಲ ಅವರು ವಿಧಾನ ಪರಿಷತ್ ಸದಸ್ಯರಾದ ಎ ವಸಂತಕುಮಾರ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್