ಕೊಪ್ಪಳ, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ಫಿರ್ಯಾದುದಾರರಿಗೆ ಜೀವ ವಿಮಾ ಪಾಲಸಿ ಪರಿಹಾರ ಪಾವತಿಸಲು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಇನ್ಸೂರೆನ್ಸ್ ಕಂಪನಿಗೆ ಆದೇಶ ನೀಡಿದೆ.
ಗ್ರಾಹಕ ಫಿರ್ಯಾದು ಸಂಖ್ಯೆ:53/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದ ಅನ್ವಯ ಫಿರ್ಯಾದುದಾರರಾದ ರಮೀಜಾ ಗಂಡ ದಿ:ನಂದನಗಡ ರಜಾಕ್ ಸಾ:6ನೇ ವಾರ್ಡ ಮೆಹಬೂಬನಗರ, ತಾ:ಗಂಗಾವತಿ ಇವರ ಗಂಡನಾದ ದಿ:ನಂದನಗಡ ರಜಾಕ್ ಇವರು ಎದುರುದಾರರಾದ ಬಜಾಜ್ ಫೈನಾನ್ಸ್ ಲಿ. ಗಂಗಾವತಿ ವಿರುದ್ಧ ದೂರನ್ನು ಸಲ್ಲಿಸಿರುತ್ತಾರೆ.
ಈ ದೂರಿನ ಸಾರಂಶ ಏನೆಂದರೆ ದೂರುದಾರರ ಗಂಡ ನಂದನಗಡ ರಜಾಕ್ ತಮ್ಮ ಜೀವಿತಾವಧಿಯಲ್ಲಿ 1ನೇ ಎದುರುದಾರರಾದ ಬಜಾಜ್ ಫೈನಾನ್ಸ್ ಲಿ. ಗಂಗಾವತಿ ಇವರಲ್ಲಿ ಮೊತ್ತ ರೂ. 3,00,000 ಗಳನ್ನು ಸಾಲವಾಗಿ ಪಡೆದುಕೊಂಡಿದ್ದು, ಸಾಲದ ಭದ್ರತೆಗಾಗಿ 2ನೇ ಎದುರುದಾರರಾದ ಹೆಚ್.ಡಿ.ಎಫ್.ಸಿ ಲೈಫ್ ಇನ್ಸೂರೆನ್ಸ್ ಕೋ.ಲಿ ಹೊಸಪೇಟೆ ಇವರ ಬಳಿ ಹೆಚ್.ಡಿ.ಎಫ್.ಸಿ ಲೈಫ್ ಗ್ರುಪ್ ಟರ್ಮ್ ಇನ್ಸೂರೆನ್ಸ್ ಪ್ಲಸ್ ಪಾಲಿಸಿ ಯನ್ನು ದಿನಾಂಕ: 18-01-2022 ರಂದು ಪಡೆದುಕೊಂಡಿರುತ್ತಾರೆ.
ಈ ಪಾಲಸಿಯ ಅವಧಿಯು ದಿನಾಂಕ: 17-01-2023 ರವರೆಗೆ ಚಾಲ್ತಿಯಲ್ಲಿರುತ್ತದೆ. ಪಿರ್ಯಾದುದಾರರ ಗಂಡ ದಿ:ನಂದನಗಡ ರಜಾಕ್ ರವರು 3ನೇ ಎದುರುದಾರರಾದ ನಿವಾ ಬೂಪಾ ಹೆಲ್ತ್ ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್ ಬೆಂಗಳೂರು ರವರ ಬಳಿ ಮತ್ತೊಂದು ಪಾಲಸಿ ನಿವಾ ಬೂಪಾ ಹೆಲ್ತ್ ಪ್ಲಸ್ ಪಾಲಸಿಯ ಮೊತ್ತ ರೂ. 10,00,000 ಗಳಿಗೆ ಪಡೆದುಕೊಂಡಿರುತ್ತಾರೆ.
ಮೇಲೆ ಹೇಳಿದ ಎರಡು ಪಾಲಸಿಗಳಿಗೆ ದೂರುದಾರರೇ ನಾಮಿನಿಯಾಗಿರುತ್ತಾರೆ. ದೂರುದಾರರ ಗಂಡ ವಿಮಾದಾರರು ದಿನಾಂಕ 29-04-2022 ರಂದು ವಾಹನ ಅಪಘಾತದಲ್ಲಿ ಮೃತಹೊಂದಿರುತ್ತಾರೆ. ಆತನ ಮರಣದ ನಂತರ ದೂರುದಾರರು ಎದುರುದಾರರ ಕಂಪನಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಕ್ಲೇಮ್ ಸಲ್ಲಿಸಿರುತ್ತಾರೆ.
ಎದುರುದಾರರು ನಂ-1 ರವರು 2ನೇ ಎದುರುದಾರರ ಕಂಪನಿಯಲ್ಲಿ ಕ್ಲೇಮ್ ಸಲ್ಲಿಸಿ, ವಿಮಾ ಮೊತ್ತವನ್ನು ಸಾಲದ ಬಾಕಿ ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಮತ್ತು ದೂರುದಾರರಿಗೆ ಎನ್.ಓಸಿ.ಯನ್ನು ನೀಡಿರುತ್ತಾರೆ. ಪಿರ್ಯಾದುದಾರರ ಗಂಡ ದಿ:ನಂದನಗಡ ರಜಾಕ್ ರವರು 3ನೇ ಎದುರುದಾರರಾದ ನಿವಾ ಬೂಪಾ ಹೆಲ್ತ್ ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್ ಬೆಂಗಳೂರು ಇವರಲ್ಲಿ ಪಡೆದ ವಿಮಾ ಪಾಲಸಿಯ ಮೊತ್ತವನ್ನು ಪಡೆಯಲು ಅಗತ್ಯ ದಾಖಲಾತಿಗಳೊಂದಿಗೆ ಕ್ಲೇಮ್ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಸ್ವೀಕರಿಸಿದ ನಂತರ ವಿಮಾ ಮೊತ್ತವನ್ನು ಬಿಡುಗಡೆ ಮಾಡಲು 3ನೇ ಎದುರುದಾರರಾದ ನಿÀವಾ ಹೆಲ್ತ್ ಇನ್ಷ್ಯೂರೆನ್ಸ್ ಕಂಪನಿಯವರು ವಿಮಾದಾರರ ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತವಾಗಿ ಮರಣ ಸಂಭವಿಸಿದೆ ಎಂದು ಕಂಡು ಬಂದ ಕಾರಣ ವಿಮಾ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲವೆಂದು ತಿರಸ್ಕರಿಸಿರುತ್ತಾರೆ.
ಆದ್ದರಿಂದ 3ನೇ ಎದುರುದಾರರು ವಿಮಾ ಪಾಲಸಿಯ ಪರಿಹಾರದ ಮೊತ್ತವನ್ನು ನೀಡದೇ ನಿರ್ಲಕ್ಷ ತೋರಿ ಸೇವಾ ನ್ಯೂನತೆ ಎಸಗಿದ್ದರಿಂದ ದೂರುದಾರಳು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗಕ್ಕೆ ವಿಮಾ ಕಂಪನಿ ವಿರುದ್ದ ಪರಿಹಾರವನ್ನು ಕೋರಿ ದೂರನ್ನು ಸಲ್ಲಿಸಿರುತ್ತಾರೆ.
ಕೊಪ್ಪಳ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರನ್ನು ದಾಖಲಿಸಿಕೊಂಡ ನಂತರ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಎದುರುದಾರ 1 ಮತ್ತು 2ರ ವಿರುದ್ಧದ ದೂರು ವಜಾ ಮಾಡುತ್ತಾ, 3ನೇ ಎದುರುದಾರರಾದ ನಿವಾ ಬೂಪಾ ಹೆಲ್ತ್ ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್ ಇವರು ಪಾಲಸಿ ಮೊತ್ತವನ್ನು ಸೂಕ್ತ ಕಾರಣಗಳಿಲ್ಲದೇ ಪಾವತಿಸದೇ ಇರುವುದು ಸೇವಾ ನ್ಯೂನತೆಯೆಂದು ಪರಿಗಣಿಸುತ್ತಾ, ಜೀವ ವಿಮಾ ಪಾಲಸಿ ಒಟ್ಟು ಮೊತ್ತ ರೂ. 10,00,000 ಗಳನ್ನು ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ಮಾನಸಿಕ ಯಾತನೆಗಾಗಿ ರೂ. 10,000 ಹಾಗೂ ದೂರಿನ ಖರ್ಚು ರೂ. 5,000 ಗಳನ್ನು 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್