ದಾವಣಗೆರೆ, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮಾರ್ಚ್ 8ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.
ಬುಧವಾರ ಜಿಲ್ಲಾ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ಕುರಿತಂತೆ ಮಾಹಿತಿ ನೀಡಲು ಏರ್ಪಡಿಸಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಉದ್ದೇಶಿಸಲಾಗಿದೆ. ರಾಷ್ಟೀಯ ಲೋಕ್ ಅದಾಲತ್ ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಗಳಲ್ಲಿರುವ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯಲಿದೆ ಎಂದು ಹೇಳಿದರು.
ಲೋಕ್ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಬಗೆಹರಿಸಲು ಅವಕಾಶವಿದೆ. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಸೇರಿದಂತೆ 41965 ಪ್ರಕರಣಗಳು ಬಾಕಿ ಇದ್ದು ಇದರಲ್ಲಿ ಶೇ 50 ರಷ್ಟು ಪ್ರಕರಣಗಳು ಕ್ರಿಮಿನಲ್ ಸ್ವರೂಪದ್ದಾಗಿವೆ. ಬಾಕಿ ಇರುವ ಪ್ರಕರಣಗಳಲ್ಲಿ ಬರುವ ಲೋಕ್ ಅದಾಲತ್‍ನಲ್ಲಿ 11366 ರಾಜಿಯಾಗಬಲ್ಲ ಪ್ರಕರಣಗಳೆಂದು ಗುರುತಿಸಿದ್ದು ಇದರಲ್ಲಿ 8 ರಿಂದ 10 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa