ಬೆಂಗಳೂರು, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ವಂಶವೃಕ್ಷ ಪಡೆಯುವಲ್ಲಿ ದಶಕಗಳಷ್ಟು ಹಳೆಯದಾದ ಮರಣ ಪ್ರಮಾಣಪತ್ರವನ್ನು ಕಂದಾಯ ಇಲಾಖೆ ಸಿಬ್ಬಂದಿ ಕೇಳುತ್ತಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ತುರ್ತಾಗಿ - ಖುದ್ದಾಗಿ ಸರಳೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ.
ಬಳ್ಳಾರಿ - ವಿಜಯನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ವಂಶವೃಕ್ಷ ಪಡೆಯುವಲ್ಲಿ ಆಗುತ್ತಿರುವ ಸಮಸ್ಯೆಗಳ ಗಮನ ಸೆಳೆದಾಗ, ಅರ್ಜಿದಾರರಿಂದ ಛಾಪಾ ಕಾಗದದ ಮೇಲೆ ವಂಶವೃಕ್ಷದ ಮಾಹಿತಿ ಪಡೆದು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರೆವೆನ್ಯೂ ಇನ್ಸ್ಪೆಕ್ಟರ್‍ಗಳು ದಾಖಲೆಗಳನ್ನು ಪರಿಶೀಲಿಸಿ ಉಪ ತಹಸೀಲ್ದಾರರ ಮೂಲಕ ದೃಢೀಕರಿಸಿ, ವಿತರಣೆ ಮಾಡಲಾಗುತ್ತದೆ ಎಂದರು.
ಮೃತರ ಮರಣ ಪ್ರಮಾಣಪತ್ರ ಇಲ್ಲದೇ ಇದ್ದ ಸಂದರ್ಭದಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮರಣ ಪ್ರಮಾಣಪತ್ರವನ್ನು ನ್ಯಾಯಾಲಯದಿಂದ ಪಡೆಯಲು ಅಧಿಕಾರಿಗಳು ನಿರ್ದೇಶನ ನೀಡುತ್ತಿದ್ದಾರೆ. ನ್ಯಾಯಾಲಯದಿಂದ ಮರಣ ಪ್ರಮಾಣ ಪತ್ರವನ್ನು ಪಡೆಯುವ ಬದಲು ಹಾಗೂ ನ್ಯಾಯಾಲಯದ ಮೇಲೆ ಒತ್ತಡವನ್ನು ಕಡಿಮೆ ಮಾಡಲು ಸಹಾಯಕ ಆಯುಕ್ತರಿಗೆ ಅಧಿಕಾರ ನೀಡಿ ಸರ್ಕಾರ ನೀಡಿದ್ದ ಆದೇಶಕ್ಕೆ, ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಜಾರಿಯಾಗಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವಾದಲ್ಲಿ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಸಲಹೆ ನೀಡಿದಂತೆ ವಂಶವೃಕ್ಷವನ್ನು ನೀಡುವಲ್ಲಿ ನಿಗದಿಯಾಗಿರುವ ಏಳು (07) ದಿನಗಳ ಕಾಲಾವಧಿಯನ್ನು 15 ದಿನಗಳಿಗೆ ಹೆಚ್ಚಿಸಲು ನೀಡಿರುವ ಸಲಹೆ ಸೂಕ್ತವಾದದ್ದು. ಈ ನಿಟ್ಟಿನಲ್ಲಿ ನಾನು, ತಕ್ಷಣವೇ ಈ ವಿಷಯದ ಕುರಿತು ಗಮನ ನೀಡುವೆ. ವಂಶವೃಕ್ಷ ವಿತರಣೆ ಮಾಡುವುದನ್ನು ಸರಳೀಕರಣಗೊಳಿಸಲು ತುರ್ತಾಗಿ ಮತ್ತು ಖುದ್ದಾಗಿ ಗಮನ ನೀಡುವೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್