ಕೊಪ್ಪಳ, 04 ಮಾರ್ಚ್ (ಹಿ.ಸ.) :
ಆ್ಯಂಕರ್ : ಫಿರ್ಯಾದುದಾರ ಗ್ರಾಹಕರಿಗೆ ಎದುರುದಾರ ಸಹಲ್ ಜೂವೇಲರ್ಸ್ ಪಾಲೀಶ್ ಗೋಲ್ಡ್ ಅಂಡ್ ಸಿಲ್ವರ್ ಅರ್ನಾಮೇಂಟ್ಸ್ ವಕ್ರ್ಸ ವತಿಯಿಂದ ಉಂಟಾದ ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.
ಗ್ರಾಹಕ ಫಿರ್ಯಾದು ಸಂಖ್ಯೆ: 75/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದ ಅನ್ವಯ ಫಿರ್ಯಾದುದಾರರಾದ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಖಾಜಾವಲಿ ಸಿದ್ದಾಪೂರ ಇವರು ಎದುರುದಾರರ ಮಾಲೀಕರು ಸಹಲ್ ಜೂವೇಲರ್ಸ್ ಪಾಲೀಶ್ ಗೋಲ್ಡ್ ಅಂಡ್ ಸಿಲ್ವರ್ ಅರ್ನಾಮೇಂಟ್ಸ್ ವಕ್ರ್ಸ ಗಾಂಧಿ ಸರ್ಕಲ್ ಹತ್ತಿರ, ಗಂಗಾವತಿ ಇವರ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ಈ ದೂರಿನ ಸಾರಂಶ ಏನೆಂದರೆ, ದೂರುದಾರನು ಎದುರುದಾರರಲ್ಲಿ ಬಂಗಾರದ ಆಭರಣಗಳನ್ನು ಮಾಡಿಸುವ ಸಲುವಾಗಿ ರೂ. 4,65,800 ಗಳ ಮೌಲ್ಯವುಳ್ಳದಷ್ಟು ಆಭರಣಗಳನ್ನು ಮಾಡಲು ಬೇಡಿಕೆ ಸಲ್ಲಿಸಿರುತ್ತಾರೆ. ಈ ಆಭರಣಗಳನ್ನು ಮಾಡಿಸಲು ಎದುರುದಾರರಿಗೆ ಮುಂಗಡವಾಗಿ ದಿನಾಂಕ: 30-04-2024 ರಂದು ರೂ. 1,60,000 ಗಳನ್ನು ಕೊಟ್ಟಿರುತ್ತಾರೆ.
ಆದರೆ ಎದುರುದಾರರು ದೂರುದಾರರಿಗೆ ನಿಗದಿತ ಅವಧಿಯೊಳಗೆ ಆಭರಣಗಳನ್ನು ಮಾಡಿ ಕೊಟ್ಟಿರುವುದಿಲ್ಲ. ದೂರುದಾರರು ಎದುರುದಾರರಿಗೆ ಅವಧಿ ಮುಗಿದ ನಂತರ ಹಣ ಅಥವಾ ಬಂಗಾರದ ಆಭರಣ ಕೊಡಿ ಎಂದು ಕೇಳಲಾಗಿ ಎದುರುದಾರರು ದೂರುದಾರರನ್ನು ದಿನಾಲೂ ಅಲೆದಾಡಿಸಿ ದಿನಾಂಕ: 05-11-2024 ರಂದು ಎದುರುದಾರರು ಒಪ್ಪಂದ ಪತ್ರವನ್ನು ಮಾಡಿಕೊಟ್ಟಿದ್ದು, ಅದೇ ದಿನ ಒಪ್ಪಂದಂತೆ ರೂ. 1,00,000 ಗಳನ್ನು ದೂರುದಾರರಿಗೆ ಕೊಟ್ಟು ಇನ್ನೂ ಬಾಕಿ ಉಳಿದ ರೂ.60,000 ಗಳನ್ನು ಹನ್ನೊಂದು ದಿನಗಳಲ್ಲಿ ಕೊಡುತ್ತೇವೆಂದು ಒಪ್ಪಿರುತ್ತಾರೆ.
ಒಂದು ವೇಳೆ ಹನ್ನೊಂದು ದಿನಗಳಲ್ಲಿ ಹಣವನ್ನು ಕೊಡದೇ ಇದ್ದಲ್ಲಿ ತಮ್ಮ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಎದುರುದಾರರು ದೂರುದಾರರಿಗೆ ಒಪ್ಪಂದ ಪತ್ರದಲ್ಲಿ ಬರೆಯಿಸಿಕೊಟ್ಟಿರುತ್ತಾರೆ. ಆದರೆ ಹನ್ನೊಂದು ದಿನಗಳ ಅವಧಿ ಮುಗಿದರೂ ಸಹ ಎದರುದಾರರು ದೂರುದಾರರರಿಗೆ ಹಣ ಅಥವಾ ಆಭರಣ ಕೊಡದೇ ದಿನೇ ದಿನೇ ಅಲೆದಾಡಿಸಿದ್ದಾರೆ. ಒಪ್ಪಂದ ಪತ್ರದಲ್ಲಿ ಹೇಳಿದಂತೆ ನಡೆದುಕೊಳ್ಳದೇ ಇದ್ದುದರಿಂದ ರೂ. 1,60,000 ಗಳ ಸೂಕ್ತ ಪರಿಹಾರ ಕೊಡಿಸಿ ಎಂದು ಪಿರ್ಯಾದುದಾರರು ಎದುರುದಾರರ ವಿರುದ್ದ ಪರಿಹಾರ ಕೋರಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ದಾಖಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ದೂರುದಾರರ ವಾದವನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ಎದುರುದಾರರು ದೂರುದಾರರಿಗೆ, ತಾವು ಪಡೆದ ಮುಂಗಡ ಹಣ ಬಾಕಿ ರೂ. 60,000 ಗಳನ್ನು ಪಾವತಿಸಿರುವುದಿಲ್ಲ. ಆದ್ದರಿಂದ ಎದುರುದಾರರು ದೂರುದಾರರಿಗೆ ರೂ. 60,000 ಗಳನ್ನು ವಾರ್ಷಿಕ ಶೇಕಡಾ 10 ರಂತೆ ಬಡ್ಡಿ ಸಮೇತ ದಿನಾಂಕ 05-11-2024 ರಿಂದ ಪಾವತಿಯಾಗುವವರೆಗೆ ದೂರುದಾರರಿಗೆ ನೀಡುವಂತೆ ಆದೇಶಿಸಿರುತ್ತಾರೆ.
ಹಾಗೂ ದೂರುದಾರರಿಗೆ ಎದುರುದಾರರಿಂದ ಉಂಟಾದ ತೊಂದರೆ ಮತ್ತು ಮಾನಸಿಕ ಯಾತನೆಗಾಗಿ ರೂ. 10,000 ಗಳನ್ನು ಮತ್ತು ಈ ದೂರಿನ ಖರ್ಚು ರೂ. 5,000 ಗಳನ್ನು ಈ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್