ಕೃಷಿಯ ವಾಸ್ತವಿಕತೆಗಳನ್ನು ಗಮನಿಸಿ : ಕುಲಪತಿ ಡಾ.ಎಂ.ಹನುಮಂತಪ್ಪ
ರಾಯಚೂರು, 04 ಮಾರ್ಚ್ (ಹಿ.ಸ.): ಆ್ಯಂಕರ್ : ಕೃಷಿ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿಯಲು ಅನೇಕ ಕಾರಣಗಳಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಗುರುತಿಸಿ ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಪ್ರಾಧ್ಯಾಪಕ ವೃಂದವು ನಿರಂತರ ಶ್ರಮವಹಿಸಬೇಕೆಂದು
ಕೃಷಿಯ ವಾಸ್ತವಿಕತೆಗಳನ್ನು ಗಮನಿಸಿ : ಕುಲಪತಿ ಡಾ.ಎಂ.ಹನುಮಂತಪ್ಪ


ರಾಯಚೂರು, 04 ಮಾರ್ಚ್ (ಹಿ.ಸ.):

ಆ್ಯಂಕರ್ : ಕೃಷಿ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿಯಲು ಅನೇಕ ಕಾರಣಗಳಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಗುರುತಿಸಿ ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಪ್ರಾಧ್ಯಾಪಕ ವೃಂದವು ನಿರಂತರ ಶ್ರಮವಹಿಸಬೇಕೆಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ. ಹನುಮಂತಪ್ಪ ಅವರು ತಿಳಿಸಿದ್ದಾರೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಧಾರವಾಡದ ಬಹುಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ: ಸಮಸ್ಯೆಗಳು ಹಾಗೂ ಅಭಿವೃದ್ಧಿಪೂರಕ ಪಥಗಳು ಕುರಿತಾದ 6 ದಿನಗಳ ಅವಧಿಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಾಸ್ತವಿಕ ಅಂಶಗಳಾದ ಕಡಿಮೆ ತಲಾ ಆದಾಯ, ಅಪೌಷ್ಟಿಕತೆ, ಕೃಷಿ ಶಿಕ್ಷಣ ಕುರಿತಾದ ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ರೂಪು-ರೇಷೆಗಳನ್ನು ನಿರ್ಧರಿಸಬೇಕೆಂದು ತರಬೇತಿಗೆ ಬಂದಿದ್ದ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಕಲಬುರಗಿ ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸುರೇಶ್ ಪಾಟೀಲ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗವು ಹೊಂದಿರುವ ಹಿಂದುಳಿಕೆ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕುವಲ್ಲಿ ಎಲ್ಲಾ ಶಿಬಿರಾರ್ಥಿಗಳು ಶ್ರಮಿಸಿ, ಅಭಿವೃದ್ಧಿಪೂರಕ ಕಾರ್ಯಕ್ರಮಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿ ಈ ಭಾಗದ ರೈತರ ಆದಾಯ ಹೆಚ್ಚಿಸಬೇಕೆಂದು ಕಿವಿಮಾತು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಪ್ರಾಧ್ಯಪಕವೃಂದ, ಸಂಶೋಧನಾ ಸಿಬ್ಬಂದಿ, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಸಮುದಾಯವು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಅರಿತುಕೊಳ್ಳುವುದು ಹಾಗೂ ಆ ಸಂಸ್ಥೆಗಳಿಗೆ ಪರಿಹಾರ ಪಥಗಳನ್ನು ಕಂಡುಕೊಳ್ಳುವ ಉದ್ದೇಶವನ್ನು ಈ ತರಬೇತಿಯು ಹೊಂದಿದೆ ಎಂದರು. ಇದೇ ಸಂದರ್ಭದಲ್ಲಿ ಡಾ. ಜಾಗೃತಿ ದೇಶಮಾನ್ಯ, ಡಾ. ಎಸ್.ಬಿ. ಗೌಡಪ್ಪ, ಡಾ. ನಾರಾಯಣ ರಾವ್, ಡಾ. ಅಮೃತ ಜೋಶಿ, ಡಾ, ಜಿ. ಬಿ.ಲೋಕೇಶ್ ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande