ಕೊಪ್ಪಳ ಮಾವು ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಲಹೆ
ಕೊಪ್ಪಳ, 04 ಮಾರ್ಚ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಹಲವು ಸಲಹೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣ್ಣಿನ ಕಣಜ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಾದ್ಯಂತ ಹಣ್ಣುಗಳ ರಾಜ `ಮಾವು' ಬೆಳೆಯನ್ನು 4000 ಹೆ
Advice from the Agricultural Extension Education Center


Advice from the Agricultural Extension Education Center


Advice from the Agricultural Extension Education Center


ಕೊಪ್ಪಳ, 04 ಮಾರ್ಚ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಹಲವು ಸಲಹೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣ್ಣಿನ ಕಣಜ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಾದ್ಯಂತ ಹಣ್ಣುಗಳ ರಾಜ `ಮಾವು' ಬೆಳೆಯನ್ನು 4000 ಹೆಕ್ಟರ್‍ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಬೆನೆಶಾನ್, ದಶಹರಿ, ಸುವರ್ಣರೇಖಾ, ರಸಪುರಿ, ಮಲ್ಗೋವಾ, ಇಮಾಮ ಪಸಂದಅಲ್ಲದೇ ಸಂಕರಣ ತಳಿಯಾದ ಮಲ್ಲಿಕಾ ಮತ್ತು ಚಟ್ನಿಕಾಯಿಗಳಾದ ಪುನಾಸ್, ಆಮ್ಲೇಟ್ ಇತ್ಯಾದಿ 12 ಕ್ಕೂ ಹೆಚ್ಚು ತಳಿಗಳನ್ನು ಬೆಳೆಯಲಾಗುತ್ತಿದೆ. ಇದರಲ್ಲಿ ಕೇಸರ ಮಾವು ಅತ್ಯಂತ ಜನಪ್ರಿಯವಾಗಿದ್ದು, ಕೊಪ್ಪಳ ಕೇಸರ ಮಾವು ಎಂದೇ ಪ್ರಸಿದ್ದಿಯಾಗಿದೆ.

ಇತ್ತೀಚೆಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಜಿಲ್ಲೆಯ ಹಲವಾರು ಮಾವಿನ ತೋಟಗಳಿಗೆ ಭೇಟಿ ನೀಡಿ, ಮಾವು ಬೆಳೆಗಾರರಿಗೆ ಬೆಳೆ ನಿರ್ವಹಣೆ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿರುತ್ತಾರೆ.

ಈಗ ತಾಪಮಾನ ಜಾಸ್ತಿ ಯಾಗುತ್ತಿದ್ದು, ರೈತರು ತಮ್ಮ ಜಮೀನಿನ ಮಣ್ಣಿನ ಆಧಾರದ ಮೇಲೆ ನಿಯಮಿತವಾಗಿ ನೀರು ಕೊಡಬೇಕು. ಕೆಂಪು ಮಣ್ಣಿನಲ್ಲಿ 3 ರಿಂದ 4 ದಿನಗಳಿಗೊಮ್ಮೆ ಮತ್ತುಕಪ್ಪು ಮಣ್ಣಿನಲ್ಲಿ 8 ರಿಂದ 10 ದಿನಗಳಿಗೊಮ್ಮೆ ನೀರುಕೊಡುತ್ತಿರಬೇಕು. ತೋಟವನ್ನು ಕಸಮುಕ್ತವಾಗಿ ಇಡಬೇಕಲ್ಲದೇ, ಗಿಡದ ಸುತ್ತಲೂ 5 ರಿಂದ 6 ಅಡಿ ಪಾತಿ (ಮಡಿ) ಮಾಡಿ ಅರ್ಧ ಅಡಿಯಷ್ಟು ಅಗೆದು ಮಣ್ಣನ್ನು ಸಡಿಲಗೊಳಿಸಬೇಕು.

ಈ ಮಡಿಯಲ್ಲಿ ಸಾಧ್ಯವಾದರೆ ಅಲಸಂದಿ ಬೀಜಗಳನ್ನು ಚಲ್ಲಿದರೆ ಅದು ಬೆಳೆದಂತೆಲ್ಲಾ ಹೊದಿಕೆಯಾಗುವುದಲ್ಲದೇ ಸಾರಜನಕ ಸ್ಥಿರೀಕರಣಗೊಂಡು ಗೊಬ್ಬರ ಕೊಡುವ ಪ್ರಮಾಣವನ್ನು ಕಡಿಮೆ ಮಾಡಬಹುದು. ತಾಪಮಾನ ಜಾಸ್ತಿಯಾಗಿ ಹಾನಿ ಆಗಬಹುದಾದ್ದರಿಂದ ಗಿಡದ ಕಾಂಡಕ್ಕೆ ಬಿರುಕುಗಳು ಮತ್ತು ರಂದ್ರಗಳು ಮುಚ್ಚಿಕೊಳ್ಳುವಂತೆ ನೆಲದಿಂದ 3 ಅಡಿ ಎತ್ತರಕ್ಕೆ ಸಿ.ಓ.ಸಿ. 50 ಎಸ್.ಪಿ. ಎನ್ನುವ ಶಿಲೀಂದ್ರನಾಶಕವನ್ನು 100 ಗ್ರಾಂ. ಜೊತೆಗೆ ಕ್ಲೋರೊಪೈರಿಫಾಸ್ 50 ಇ.ಸಿ. 5 ಮಿ.ಲೀ. ಪ್ರತಿ ಲೀಟರ ನೀರಿಗೆ ಬೆರೆಸಿದ ದ್ರಾವಣವನ್ನು ಲೇಪನ ಮಾಡಬೇಕು ಹಾಗೂ ರೋಗಗ್ರಸ್ಥ, ಕೀಟಗಳ ಬಾಧೆಯಿಂದ ಒಣಗಿದ ರಂಬೆಗಳನ್ನು ಕತ್ತರಿಸಿ ತೆಗೆದು ಹಾಕಿ ಇದೇ ದ್ರಾವಣವನ್ನು ಲೇಪನ ಮಾಡಬೇಕು.

ಹೂ ಅಥವಾ ಹೀಚು ಉದುರುತ್ತಿದ್ದರೆ, ಎನ್.ಎ.ಎ. ಎನ್ನುವ ಸಸ್ಯ ಪ್ರಚೋದಕವನ್ನು (ಪ್ಲ್ಯಾನೊಫಿಕ್ಸ್) 0.4 ಮಿ.ಲೀ. ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಾವಯವ ಮತ್ತು ಜೈವಿಕ ಗೊಬ್ಬರಗಳಾದ ಜೀವಾಮೃತ, ಗೋಕೃಪಾಮೃತ ಅಲ್ಲದೇ ದ್ರವರೂಪದ ಗೊಬ್ಬರಗಳನ್ನು ಸಿಂಪಡಿಸುತ್ತಿರಬೇಕು. ಪೋಷಕಾಂಶಗಳ ನಿರ್ವಹಣೆಗಾಗಿ ಪೋಟ್ಯಾಷಿಯಂ ನೈಟ್ರೇಟ್ 5 ಗ್ರಾಂ. ಮತ್ತು ಮಾವು ಸ್ಪೇಷಲ್ ಎನ್ನುವ ಲಘು ಪೋಷಕಾಂಶಗಳ ಮಿಶ್ರಣವನ್ನು 5 ಗ್ರಾಂ. ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎಕರೆಗೆ 8 ರಿಂದ 10 ಹಣ್ಣಿನ ನೊಣದ ಹತೋಟಿಗಾಗಿ ಮೋಹಕ ಬಲೆಗಳನ್ನು ಅಳವಡಿಸಬೇಕು. ಕೀಟ ಅಥವಾ ರೋಗಗಳ ಸೂಕ್ತ ಮಾಹಿತಿ ಮತ್ತು ಹತೋಟಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ಸೂಕ್ತವಾದ ಪರಿಸರ ಸ್ನೇಹಿ ರಾಸಾಯನಿಕ ಅಥವಾ ಜೈವಿಕ ಪೀಡೆ ನಾಶಕಗಳನ್ನು ಬಳಸಬೇಕು.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ ಮೊ.ನಂ: 9480247745 ಮತ್ತು ತೋಟಗಾರಿಕೆ ತಜ್ಞ ವಾಮನಮೂರ್ತಿ ಮೊ.ನಂ: 8217696837 ಗೆ ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande