ಬೆಂಗಳೂರು, 11 ಮಾರ್ಚ್ (ಹಿ.ಸ.):
ಆ್ಯಂಕರ್:
ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳು 2024-25ನೇ ಸಾಲಿನಲ್ಲಿ ದಾಖಲೆಯ ₹23.06 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡಿದ್ದು. ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಇರುವ 261 ಗ್ರಾಮ ಪಂಚಾಯಿತಿಗಳಲ್ಲಿ ಈವರೆಗೂ ವಾರ್ಷಿಕ ₹10-11 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ಅದರ ದುಪ್ಪಟ್ಟು ಕರ ಸಂಗ್ರಹವಾಗಿರುವುದು ಹೆಮ್ಮೆಯ ಸಂಗತಿ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ ವಸೂಲಿಯಲ್ಲಿ ಎದುರಾಗುತ್ತಿರುವ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಿ, ಆಸ್ತಿಗಳ ಮೌಲ್ಯಮಾಪನ, ತೆರಿಗೆ ನಿರ್ಧಾರದ ಕ್ರಮ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಅದರ ಅನ್ವಯ ನಡೆಸಿದ ಆಸ್ತಿ ಸಮೀಕ್ಷೆ, ಮೌಲ್ಯಮಾಪನದ ಪರಿಣಾಮ ತೆರಿಗೆ ಮೊತ್ತ ₹36.62 ಕೋಟಿಗೆ ಹೆಚ್ಚಳವಾಗಿದೆ ಎಂದಿದ್ದಾರೆ.
ತೆರಿಗೆ ಸಂಗ್ರಹಣೆ ಪಂಚಾಯಿತಿ ಮಟ್ಟದಲ್ಲಿ ಸವಾಲಾಗಿತ್ತು. ಪಂಚತಂತ್ರ - 2ರಲ್ಲಿ ಆಸ್ತಿ ನೋಂದಣಿ ಹಾಗೂ ಕರ ಪಾವತಿಗೆ ಅವಕಾಶ ನೀಡಿರುವುದು, ತೆರಿಗೆ ಕಟ್ಟುವಂತೆ ಜಾಗೃತಿ ಅಭಿಯಾನ, ತೆರಿಗೆ ಸಂಗ್ರಹಕ್ಕೆ ಪಿಡಿಒ, ಬಿಲ್ ಕಲೆಕ್ಟರ್‌ಗಳಿಗೆ ಜವಾಬ್ದಾರಿ ವಹಿಸಿದ್ದು, ಪ್ರತಿ ಗ್ರಾ.ಪಂ.ಗಳಿಗೆ ಪಿಒಎಸ್ ಯಂತ್ರ ಒದಗಿಸಿದ್ದು ಮುಂತಾದ ಕ್ರಮಗಳು ಯಶಸ್ವಿಯಾಗಿವೆ. ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸದ ಕಾರ್ಖಾನೆಗಳಿಗೆ ನೋಟಿಸ್ ನೀಡಿ ಕರ ವಸೂಲಿ ಮಾಡಲಾಗಿದೆ. ಹಾಗೆಯೇ ಇನ್ನೂ ₹13.56 ಕೋಟಿ ತೆರಿಗೆ ಸಂಗ್ರಹ ಬಾಕಿ ಇದ್ದು, ಅದರ ಸಂಗ್ರಹಣೆಗೆ ಒತ್ತು ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜನಪರ ಆಡಳಿತದ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಅದೇ ರೀತಿ ಆರ್ಥಿಕವಾಗಿ ಪಂಚಾಯಿತಿಗಳನ್ನು ಸದೃಢಗೊಳಿಸುವಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಲಬುರಗಿ ಜಿಲ್ಲೆಯಂತೆಯೇ ರಾಜ್ಯಾದ್ಯಂತ ಎಲ್ಲ ಗ್ರಾ.ಪಂ.ಗಳಲ್ಲಿ ಕೂಡ ಇದೇ ರೀತಿ ಆಸ್ತಿ ಮೌಲ್ಯಮಾಪನ, ತೆರಿಗೆ ವಸೂಲಿ ಹೆಚ್ಚಳ ಹಾಗೂ ಸುಗಮ ಪಾವತಿಗೆ ಅವಕಾಶ ನೀಡುವ ಮೂಲಕ ಪಂಚಾಯಿತಿಗಳನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಗುರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa