ಕೊಪ್ಪಳ, 10 ಮಾರ್ಚ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಪಟ್ಟಣದ ಅಶೋಕ ವೃತ್ತದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನೇತೃತ್ವದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸುವ ಮೂಲಕ ಹೋರಾಟಗಾರರು ಮತ್ತು ವಿದ್ಯಾರ್ಥಿಗಳು ಸರಕಾರಕ್ಕೆ ಮತ್ತೊಮ್ಮೆ ಕಾರ್ಖಾನೆ ಬಂದ್ ಮಾಡುವಂತೆ ಕರೆ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು, ಬಿಎಸ್‍ಪಿಎಲ್ ಎಂಎಸ್‍ಪಿಎಲ್ ಕಾರ್ಖಾನೆ ವಿಸ್ತರಣೆಯ ಅನುಮತಿಯನ್ನು ಶಾಶ್ವತವಾಗಿ ಕೈಬಿಡಬೇಕು, ಬಾಧಿತ ಪ್ರದೇಶಗಳ ಜನರ ಜೀವ, ಆರೋಗ್ಯ, ಕೃಷಿ ಬೆಳೆ ಹಾನಿ ಮಾಡಿದ, ಜಾನುವಾರುಗಳ ಸಾವಿಗೆ ಕಾರಣವಾದ, ಭೂಮಿ ಫಲವತ್ತತೆ ಹಾಳು ಮಾಡಿದ, ಅಂತರ್ಜಲ ವಿಷಗೊಳಿಸಿದ ಎಲ್ಲಾ ಸ್ಪಾಂಜ್ ಐರನ್, ಉಕ್ಕು, ರಸಾಯನ ಗೊಬ್ಬರ, ಸಿಮೆಂಟ್ ಸುಣ್ಣ ತಯಾರಿಸುವ ಕಾರ್ಖಾನೆಗಳನ್ನು ಬಂದ್ ಮಾಡಬೇಕು.
ಕಾರ್ಖಾನೆ ಬಾಧಿತ ತಾಲೂಕಿನ 20 ಗ್ರಾಮಗಳ ಜನರು ದೂಳು, ಹೊಗೆ, ಹಾರು ಬೂದಿ ಸೇವಿಸಿ ಅನಾರೋಗ್ಯ ಪೀಡಿತರಾಗಿದ್ದು, ಕಳೆದ 10 ವರ್ಷಗಳಲ್ಲಿ ರೋಗ ಬಾಧನೆಯಾದವರ ಸಮೀಕ್ಷೆ ನಡೆಸಿ, ಎಐಐಎಂಎಸ್ ಅಥವಾ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮೂಲಕ ಆರೋಗ್ಯ ತಪಾಸಣೆ ಕೈಕೊಳ್ಳಬೇಕು, ಬಸಾಪುರ ಗ್ರಾಮ ಸ.ನಂ: 143ರ 44.35 ಎಕರೆ ಸಾರ್ವಜನಿಕ ಕೆರೆಯನ್ನು ಎಂಎಸ್‍ಪಿಎಲ್ ಕಂಪನಿವರು ಕಬಳಿಸಿ ಕಾಂಪೌಂಡ್ ಕಟ್ಟಿಕೊಂಡು ರಸ್ತೆ ಬಂದ್ ಮಾಡಿದ್ದನ್ನು ತೆರವುಗೊಳಿಸಬೇಕು, ತುಂಗಭದ್ರಾ ಜಲಾಶಯಕ್ಕೆ ತ್ಯಾಜ್ಯ ಬಿಟ್ಟು ನೀರು ವಿಷಗೊಳಿಸುವ ಎಲ್ಲಾ ಕಾರ್ಖಾನೆಗಳನ್ನು ಬಂದ್ ಮಾಡಬೇಕು, ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಪರಮಾಣು ಸ್ಥಾವರವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿದರು.
ಸಂಚಾಲಕಿ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಇದು ಒಬ್ಬರ ಹೋರಾಟವಂತೂ ಅಲ್ಲವೇ ಅಲ್ಲ, ಜನರ ಬದುಕು ಮುಖ್ಯ, ಉತ್ತಮ ಆರೋಗ್ಯ ಮುಖ್ಯ ನಂತರ ದುಡಿಮೆ. ಸ್ವಚ್ಛ ಪರಿಸರಕ್ಕೆ ಮಾರಕವಾಗಿರುವ ಕಾರ್ಖಾನೆಗಳ ವಿರುದ್ಧ ಹೋರಾಟ ನಿಲ್ಲುವದಿಲ್ಲ. ಪ್ರತಿಯೊಬ್ಬರೂ ಇದನ್ನು ತಮ್ಮ ಹೋರಾಟವೆಂದು ಭಾವಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನ ಎಲ್ಲಾ ಸ್ಥರದ ಹೋರಾಟಕ್ಕೆ ಬರಬೇಕು ಎಂದು ಕರೆ ನೀಡಿದರು.
ಆಂದೋಲನ ಸಮಿತಿ ಪ್ರಮುಖರಾದ ಕೆ.ಬಿ. ಗೋನಾಳ ಮಾತನಾಡಿ, ಮೊಟ್ಟ ಮೊದಲು 1991ರಲ್ಲಿ ಬೇವಿನಹಳ್ಳಿಯಲ್ಲಿ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಗಾಗಿ ರೈತರು ಉದ್ಯೋಗ ಸಿಗುವ ಆಸೆಯಿಂದ ಭೂಮಿ ಕೊಟ್ಟರು. ನಂತರ ಬಂದ ಕಲ್ಯಾಣಿ ಗಿಣಿಗೇರಿಯಲ್ಲಿ ಸ್ಥಾಪನೆಯಾಗಿ ವಸಾಹತು ರೀತಿ ಬದಲಾಯಿತು. ಇತ್ತ ಬಸಾಪುರದ 184 ಎಕರೆ ಕೃಷಿ ಭೂಮಿಯಲ್ಲಿ 2001ರಲ್ಲಿ ಬಲ್ಡೋಟ ಎಂಎಸ್‍ಪಿಎಲ್ ಕಂಪನಿ ವಿಮಾನ ನಿಲ್ದಾಣ ಸ್ಥಾಪಿಸಿತು. ನಗರಕ್ಕೆ ಹೊಂದಿಕೊಂಡು ಎಂಎಸ್‍ಪಿಎಲ್ ಸ್ಪಾಂಜ್ ಐರನ್ ಘಟಕ ಸ್ಥಾಪಿಸಲು 2006 ರಲ್ಲಿ ಧರಂಸಿಂಗ್ ಸರ್ಕಾರ ಹಾಲವರ್ತಿ, ಕೊಪ್ಪಳ, ಬಸಾಪೂರ, ಬೆಳವಿನಾಳ ಗ್ರಾಮದ 1034 ಎಕರೆ ಫಲವತ್ತಾದ ಕೃಷಿ ಭೂಮಿ ಮತ್ತು 44.35 ಎಕರೆ ಸಾರ್ವಜನಿಕ ಕೆರೆ, 12.21 ಎಕರೆ ಸರ್ಕಾರಿ ಜಮೀನು ಸೇರಿ ಕೆಐಎಡಿಬಿ ಮೂಲಕ ದೌರ್ಜನ್ಯದಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು.
ಮತ್ತೋರ್ವ ಪ್ರಮುಖರಾದ ಡಿ. ಹೆಚ್. ಪೂಜಾರ ಅವರು ಮಾತನಾಡಿ, ಬಸಾಪುರದ 44.35 ಎಕರೆ ಕೆರೆಯನ್ನು ಕೇವಲ ರೂ. 33 ಲಕ್ಷಕ್ಕೆ ಮಾರಿದ ಸರ್ಕಾರ ಕಿಂಚಿತ್ತೂ ಜನರ ಅಹವಾಲನ್ನು ಆಲಿಸಿಲ್ಲ. ಬಸಾಪುರ, ಕೊಪ್ಪಳ, ಬೆಳವಿನಾಳ ಜಮೀನು ನಗರ ಯೋಜನೆಯ ಅಧಿಸೂಚನೆಗೆ ಒಳಪಟ್ಟಿರುತ್ತದೆ. ಆದರೂ ಈ ಭೂಮಿಯನ್ನು ಎಂಎಸ್ ಪಿಎಲ್ ಕಂಪನಿಗೆ ಕೊಟ್ಟದ್ದು ದುರದೃಷ್ಟಕರ ಎಂದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಮುಖಾಂಡರಾದ ಬಸವರಾಜ್ ಶೀಲವಂತರ್, ಮಹಾಂತೇಶ್ ಕೊತಬಾಳ, ನಜೀರ್ ಸಾಬ್ ಮೂಲಿಮನಿ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಮಂಗಳೇಶ ರಾಠೋಡ್, ಶರಣು ಪಾಟೀಲ್, ಮಂಜುಳಾ ಎಂ. ಶಾರದಾ ಜಿ, ಎಸ್.ಎ.ಗಫಾರ್, ಮುದುಕಪ್ಪ ಹೊಸಮನಿ, ಬಸವರಾಜ ನರೇಗಲ್, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಮಕಬುಲ್, ಶರಣು ಶೆಟ್ಟರ್, ಭೀಮಸೇನ್ ಕಲಕೇರಿ, ಹನುಮಂತಪ್ಪ ಹೊಳೆಯಾಚೆ, ಮದ್ದಾನಯ್ಯ ಹಿರೇಮಠ್, ಶ್ರೀನಿವಾಸ್ ಭೋವಿ, ಸಾವಿತ್ರಿ ಮುಜುಂದಾರ, ಪಂಪಾಪತಿ ಆರ್. ಹುಲಿಗಿ, ಡಿ. ಎಂ. ಬಡಿಗೇರ್, ಶಿವಣ್ಮ ದೇವರಮನಿ ಬಗನಾಳ, ಮಹೇಶ ಬಗನಾಳ, ಗವಿ ಪುಟಗಿ ಬಗನಾಳ, ಯಂಕಪ್ಪ ಕಾಸನಕಂಡಿ, ಈರಣ್ಣ ಬಹಾದ್ದೂರಬಂಡಿ, ಪರಿಸರ ಹಿತರಕ್ಷಣಾ ವೇದಿಕೆಯಿಂದ ಶರಣಪ್ಪ ಸಜ್ಜನ, ರಮೇಶ ತುಪ್ಪದ, ಶಿವಕುಮಾರ ಕುಕನೂರ, ಗುರುರಾಜ ಹಲಗೇರಿ, ಡಾ. ಮಂಜುನಾಥ ಸಜ್ಜನ, ಕೆ. ಎಂ. ಸೈಯ್ಯದ್, ಮಹಾಂತೇಶ ಮೈನಳ್ಳಿ, ವಿರೇಶ ಮಹಾಂತಯ್ಯನಮಠ, ಮಂಜುನಾಥ ಅಂಗಡಿ, ಖತಿಬ್ ಬಾಷಾ, ಗವಿಸಿದ್ದನಗೌಡ ಪಾಟೀಲ್, ಸೋಮನಗೌಡ ಹೊಗರನಾಳ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ತಹಶೀಲ್ದಾರ ವಿಠ್ಠಲ ಚೌಗಲಾ ಅವರಿಗೆ ಮನವಿ ಕೊಟ್ಟರು. ವಿದ್ಯಾರ್ಥಿನಿಯರು ಸಹ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್