


ಹೊಸಪೇಟೆ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೈನಂದಿನ ಆಹಾರದಲ್ಲಿ ಪ್ರತಿಯೊಬ್ಬರು ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಿ ಕೌಟುಂಬಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಪ್ರಸ್ತುತದಲ್ಲಿ ಆಹಾರವೇ ಆರೋಗ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಹೇಳಿದ್ದಾರೆ.
ನಗರದ ಕನಕದಾಸರ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ ವತಿಯಿಂದ ಅಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯ ನ್ಯೂಟ್ರಿ ಸಿರಿಧಾನ್ಯಗಳ ಕಾರ್ಯಕ್ರಮದಲ್ಲಿ ಆಹಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳದ ಪ್ರಯುಕ್ತ ಏರ್ಪಡಿಸಿದ್ದ ‘ಸಿರಿಧಾನ್ಯಗಳ ನಡಿಗೆ, ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿನ ಸಿರಿಧಾನ್ಯಗಳು ಸಾಂಪ್ರದಾಯಿಕ ಭಾರತೀಯ ಕೃಷಿಯಲ್ಲಿ ಅತ್ಯಂತ ಪೌಷ್ಠಿಕಾಂಶಯುಕ್ತವಾದ ಧಾನ್ಯಗಳಾಗಿವೆ. ಇವುಗಳನ್ನು ಆಹಾರ ಪದ್ದತಿಯಲ್ಲಿ ಹೆಚ್ಚಾಗಿ ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಸಿರಿಧಾನ್ಯಗಳಲ್ಲಿ ನಾರು, ಕಬ್ಬಿಣದ ಅಂಶಗಳು ಹಾಗೂ ಕಾರ್ಬೋಹೈಡ್ರೇಟ್‍ಗಳು ಹೆಚ್ಚಾಗಿವೆ. ಇವುಗಳಲ್ಲಿ ಶಕ್ತಿಶಾಲಿ ಆಯಂಟಿ ಆಕ್ಸಿಡೆಂಟ್‍ಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ರೋಗಗಳನ್ನು ದೂರವಿಡಲು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯಕವಾಗುತ್ತವೆ.
ಅಕ್ಕಿ, ಗೋಧಿ ಧಾನ್ಯಗಳಿಗಿಂತ ಐದು ಪಟ್ಟು ಪ್ರೋಟಿನ್, ವಿಟಮಿನ್‍ಗಳನ್ನು ಹೊಂದಿವೆ. ಸಿರಿಧಾನ್ಯಗಳ ಮಹತ್ವವನ್ನು ಜಾಗೃತಿಗೊಳಿಸಲು ಈ ಸಿರಿಧಾನ್ಯಗಳ ನಡಿಗೆ ಕಾರ್ಯಕ್ರಮ ಸಹಕಾರಿಯಾಗಲಿದೆ. ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಬೆಳೆಯುವ ಸಾವಯವ ಬೆಳೆಗಳು ಸಿರಿಧಾನ್ಯಗಳಾಗಿವೆ. ಕುಟುಂಬದ ಯಜಮಾನಿಯರು ಈ ಸಿರಿಧಾನ್ಯಗಳ ಉಪಯುಕ್ತ ಮಾಹಿತಿಯನ್ನು ಅರಿಯಬೇಕಿದೆ. ಹಾಗಾದರೇ ಕುಟುಂಬದ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿದಂತಗಲಿದೆ ಎಂದರು.
ಬಳಿಕ ಸಿರಿಧಾನ್ಯ ನಡಿಗೆಯು ನಗರದ ಕನಕದಾಸರ ವೃತ್ತದಿಂದ ಆರಂಭಗೊಂಡು ಡಾ.ಪುನೀತ್‍ರಾಜಕುಮಾರ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ವಿಜಯನಗರ ಕಾಲೇಜು ರಸ್ತೆ ಮಾರ್ಗವಾಗಿ ಜಿಲ್ಲಾ ಒಳಕ್ರೀಡಾಂಗಣದವರಗೆ ವಿವಿಧ ಕಲಾ ಮತ್ತು ವಾದ್ಯ ತಂಡಗಳೊಂದಿಗೆ ಸಿರಿಧಾನ್ಯ ಬಳಕೆಯ ನಾಮಫಲಕಗಳನ್ನಿಡಿದು ಕಾಲ್ನಡಿಗೆ ಮೂಲಕ ಜಾಗೃತಿ ಜಾಥವನ್ನು ನಡೆಸಲಾಯಿತು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ, ಕೃಷಿ ಇಲಾಖೆ ಉಪನಿರ್ದೇಶಕ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್